ಕೊಪ್ಪಳ: ಸಮಾಜದಲ್ಲಾಗುವ ವಿಪತ್ತುಗಳಿಗೆ ಸ್ಪಂದಿಸುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯುವಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಹಮ್ಮಿಕೊಂಡಿರುವ ಈ ಯುವ ಕಾರ್ಯಾಗಾರದಲ್ಲಿ ಭಾಗವಹಿಸಿರುವ ನೀವೆಲ್ಲರೂ ಪುಣ್ಯವಂತರು. ಇದನ್ನು ಸದ್ಬಳಕೆ ಮಾಡಿಕೊಂಡು ಮನಪರಿವರ್ತನೆಯೊಂದಿಗೆ ಬೆಳೆಯಬೇಕು ಎಂದರು.
ಯಾರು ತ್ಯಾಗ ಮಾಡುತ್ತಾರೋ, ಅವರು ಬೆಳೆಯುತ್ತಾರೆ. ಅಂಥ ತ್ಯಾಗ ಮತ್ತು ಸೇವಾ ಮನೋಭಾವವನ್ನು ರೆಡ್ ಕ್ರಾಸ್ ಕಲಿಸಿಕೊಡುತ್ತದೆ. ದೇಶ ಪ್ರಗತಿ ಸಾಧಿಸುವುದು ಎಂದರೆ ದೇಶದೊಳಗಿರುವ ಯುವಕರು ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳದಲ್ಲಿ ಪ್ರಾರಂಭಿಸಿದ ಬ್ಲಡ್ ಬ್ಯಾಂಕ್‌ಗೆ ಪರವಾನಗಿ ಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿ ಶಕ್ತಿಮೀರಿ ಶ್ರಮಿಸಿದ್ದೇನೆ. ಅಂಥ ಬ್ಲಡ್ ಬ್ಯಾಂಕ್‌ನಿಂದ ಸಾವಿರಾರು ಜನರಿಗೆ ಜೀವ ಉಳಿಯಲು ಸಾಧ್ಯವಾಗಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತದೆ. ವಿಪತ್ತು ಬಂದಾಗಲೆಲ್ಲ ಅದು ಸ್ಪಂದಿಸುತ್ತದೆ. ಮಾನವೀಯತೆಯೇ ಅದರ ಮೂಲ ಧ್ಯೇಯ ಎಂದರು.
ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ನಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿ, ಉತ್ತಮ ಚಿಕಿತ್ಸೆ ದೊರೆಯಲು ಸಾಧ್ಯವಾಗಿದೆ. ರಕ್ತ ಸಿಗದೆ ಇದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕಳುಹಿಸುವ ಸ್ಥಿತಿ ಇತ್ತು. ಆದರೀಗ, ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಆಗಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಡಾ. ಕೃಷ್ಣ ವಿ. ಓಂಕಾರ, ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ, ಭಾರೆಕ್ರಾ ಪ್ರ.ಕಾ. ಡಾ. ಶ್ರೀನೀವಾಸ ಹ್ಯಾಟಿ, ಉಪಸಭಾಪತಿ ಡಾ. ಗವಿಸಿದ್ದನಗೌಡ ಪಾಟೀಲ್, ಗೌರವ ಕೋಶಾಧ್ಯಕ್ಷ ಸುಧೀರ ಅವರಾಧಿ, ನಿರ್ದೇಶಕರಾದ ಡಾ. ಚಂದ್ರಶೇಖರ ಕರಮುಡಿ, ಡಾ. ಶಿವನಗೌಡ, ಡಾ. ದಾನರಡ್ಡಿ, ಡಾ. ಮಂಜುನಾಥ ಇದ್ದರು. ನಿರ್ದೇಶಕ ರಾಜೇಶ ಯಾವಗಲ್ ನಿರೂಪಿಸಿದರು.
ಕೊಪ್ಪಳದಲ್ಲಿ ಯುವ ರೆಡ್ ಕ್ರಾಸ್ ಕಾರ್ಯ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.