ಪ್ರತಿಭಾವಂತರನ್ನು ಗೌರವಿಸುವಲ್ಲಿ ಟ್ರಸ್ಟ್ ಕಾರ್ಯ ಶ್ಲಾಘನೀಯ

KannadaprabhaNewsNetwork | Published : Aug 27, 2024 1:43 AM

ಸಾರಾಂಶ

ಎಲ್ಲಾ ವರ್ಗದ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಸಮೃದ್ಧಿ ಶಿಕ್ಷಣ ಟ್ರಸ್ಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಗೌಡಗೆರೆ ಮಠದ ಡಾ.ಮಲ್ಲೇಶ್ ಸ್ವಾಮೀಜಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಎಲ್ಲಾ ವರ್ಗದ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಸಮೃದ್ಧಿ ಶಿಕ್ಷಣ ಟ್ರಸ್ಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಗೌಡಗೆರೆ ಮಠದ ಡಾ.ಮಲ್ಲೇಶ್ ಸ್ವಾಮೀಜಿ ಶುಭ ಹಾರೈಸಿದರು.

ನಗರದ ಚಿಕ್ಕಪೇಟೆಯಲ್ಲಿ ಸಮೃದ್ಧಿ ಶಿಕ್ಷಣ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಇಂದಿನ ದುಬಾರಿ ಯುಗದಲ್ಲಿ ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ, ಅದರಲ್ಲೂ ಬಡ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವುದೇ ದುಸ್ಸಾಹಸವಾಗಿದೆ, ಆರ್ಥಿಕ ಸಂಕಷ್ಟ ಹೊಂದಿರುವ ಕುಟುಂಬಗಳು ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದ ಸ್ಥಿತಿ ಇದೆ, ಇಂಥ ಬಡ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕೆಲಸಕ್ಕೆ ಮುಂದಾಗಿರುವ ಟ್ರಸ್ಟ್ ಚಿಂತನೆ ಶ್ಲಾಘನೀಯ ಎಂದರು.

ಇದಿಷ್ಟೇ ಅಲ್ಲದೆ ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವುದು, ಅಗತ್ಯವಿರುವ ಔಷಧೋಪಚಾರ ನೀಡುವ ಕಾರ್ಯಕ್ಕೆ ಮುಂದಾಗಿರುವುದು ಕೂಡ ಮಾನವೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮಾತನಾಡಿ, ಸಾಮಾಜಿಕ ಕಾರ್ಯ ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಈ ಸಮೃದ್ಧಿ ಶಿಕ್ಷಣ ಟ್ರಸ್ಟ್ ಆರಂಭಿಸಲಾಗಿದೆ, ಬಡ ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಆರ್ಥಿಕ ನೆರವು, ನೋಟ್ ಬುಕ್, ಪೆನ್, ಪೆನ್ಸಿಲ್ ಸೇರಿ ಅಗತ್ಯ ಪರಿಕರ ವಿತರಿಸುವ ಜೊತೆಗೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಸೇರಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬಡ ಕುಟುಂಬದ ಹಿರಿಯ ನಾಗರಿಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ನೆರವಿಗೂ ಧಾವಿಸುವ ಕೆಲಸ ಮಾಡಲಾಗುತ್ತೆ, ಅಗತ್ಯ ಆರೋಗ್ಯ ಸೇವೆ, ಅಗತ್ಯವಾದ ಔಷಧಿ ಒದಗಿಸುವ ಕಾರ್ಯ ಮಾಡಲಾಗುವುದು, ಸಾಮಾಜಿಕ ಕಾರ್ಯವೇ ಟ್ರಸ್ಟ್ ನ ಮೂಲ ಉದ್ದೇಶವಾಗಿದೆ ಎಂದರು.

ಟ್ರಸ್ಟ್ ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷ ನಂಜುಂಡಯ್ಯ, ಖಜಾಂಚಿ ನಾಗರಾಜು, ಟ್ರಸ್ಟಿಗಳಾದ ಹರೀಶ್, ಸುನೀಲ್, ನಾಗರಾಜು, ಕುರ್ಮರ್, ನರಸಿಂಹರಾಜು ಇನ್ನಿತರರು ಇದ್ದರು.

Share this article