ವೇತನವಿಲ್ಲದೇ ಹಬ್ಬದ ಸಂಭ್ರಮ ಕಳೆದುಕೊಂಡ ಕಾರ್ಯಕರ್ತೆಯರು

KannadaprabhaNewsNetwork | Published : Oct 8, 2024 1:00 AM

ಸಾರಾಂಶ

ಕುಟುಂಬ ನಿರ್ವಹಣೆ ಸೇರಿದಂತೆ ಇತರೆ ಕಾರ್ಯಕ್ಕೆ ಹಣ ಇಲ್ಲದ ಕಾರಣ ಅಲ್ಲಲ್ಲಿ ಸಾಲ ಮಾಡಿ ಮನೆ ನಡೆಸುವಂತಾಗಿದೆ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಕಳೆದ ಮೂರು ತಿಂಗಳಿನಿಂದ ವೇತನವಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಪರದಾಡುವಂತಾಗಿದೆ. ಅಲ್ಲಲ್ಲಿ ಸಾಲ ಮಾಡಿ ಜೀವನ ಸಾಗಿಸುತ್ತಿದ್ದು, ದಸರಾ, ದೀಪಾವಳಿ ಅಂತ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ವೇತನವಿಲ್ಲದೇ ಹಬ್ಬದ ಸಂಭ್ರಮವೇ ಇಲ್ಲದಂತಾಗಿದೆ.

ಕುಟುಂಬ ನಿರ್ವಹಣೆ ಸೇರಿದಂತೆ ಇತರೆ ಕಾರ್ಯಕ್ಕೆ ಹಣ ಇಲ್ಲದ ಕಾರಣ ಅಲ್ಲಲ್ಲಿ ಸಾಲ ಮಾಡಿ ಮನೆ ನಡೆಸುವಂತಾಗಿದೆ, ಅಧಿಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ, ಬಂದ ನಂತರ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳುತ್ತಾರೆ, ಆದರಿಂದ ಅಂಗನವಾಡಿ ಕಾರ್ಯಕರ್ತೆಯರು ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ.

ವಿದ್ಯುತ್‌ ಬಿಲ್‌ ಪಾವತಿಗೂ ತತ್ವಾರ: ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಸಲು ಇಲಾಖೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಿದ್ದು, ಚಿಕ್ಕ ಮಕ್ಕಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ವಿಪರೀತ ಝಳಕ್ಕೆ ಸಿಲುಕಿ ಸಂಕಷ್ಟದಲ್ಲಿ ದಿನ ದೂಡುವಂತಾಗಿದೆ.

ತಾಲೂಕಿನಲ್ಲಿ ಒಟ್ಟು ೨೩೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿದ್ದು, ಕಳೆದ ೭ತಿಂಗಳಿನಿಂದ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಇಲ್ಲದೇ ಚಿಕ್ಕ ಚಿಕ್ಕ ಮಕ್ಕಳು ಝಳದಲ್ಲಿ ಸಿಲುಕಿ ನರಳುವಂತಾಗಿದೆ. ಫ್ಯಾನ್ ಅಳವಡಿಸಿದ್ದು, ವಿದ್ಯುತ್ ಪೂರೈಕೆ ಇಲ್ಲದೇ ಬಂದಾಗಿದೆ. ತುರ್ತು ಸೌಲಭ್ಯ ಕಲ್ಪಿಸಿಕೊಡುವಂತೆ ಸ್ಥಳೀಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.

ಶಿರಹಟ್ಟಿ ಪಪಂ ವ್ಯಾಪ್ತಿಯ ಖಾನಾಪುರ, ಹರಿಪುರ ಸೇರಿದಂತೆ ಪಟ್ಟಣದಲ್ಲಿ ಒಟ್ಟು ೧೭ಅಂಗನವಾಡಿ ಕೇಂದ್ರಗಳಿದ್ದು, ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಕಟ್ ಮಾಡಲಾಗಿದೆ. ಇನ್ನು ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಫ್ಯಾನ್ ಅಳವಡಿಸಿದ್ದರೂ, ಪೂರ್ಣವಾಗಿ ಜೋಡಣೆ ಮಾಡದೇ ಇರುವುದರಿಂದ ಉಪಯೋಗಕ್ಕೆ ಬಾರದಂತಾಗಿವೆ.

ಒಂದೊಂದು ಅಂಗನವಾಡಿ ಕೇಂದ್ರಗಳಲ್ಲಿ ₹ ೧.೫೦೦ ಕ್ಕೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಹಣ ಪಾವತಿಸಲು ಹೆಸ್ಕಾಂ ಸಿಬ್ಬಂದಿ ಅನೇಕ ಬಾರಿ ಒತ್ತಡ ಹೇರಿದರೂ ಪಾವತಿಯಾಗಿಲ್ಲ. ಇಲಾಖೆಯ ನಿರ್ಲಕ್ಷ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರು ವಿದ್ಯುತ್ ಸಂಪರ್ಕ ಕಡಿತ ಭೀತಿಯಿಂದ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಒದಗಿದೆ. ಇರುವುದೊಂದೇ ಕೋಣೆ ಅದರಲ್ಲಿ ೨೫ ರಿಂದ ೩೦ಮಕ್ಕಳು ಆಡಬೇಕು. ಕಲಿಯಬೇಕು. ಮಕ್ಕಳ ಆಟಿಕೆಗಳ ಜತೆಗೆ ರೇಷನ್ ದಾಸ್ತಾನು ಕೂಡಾ ಅದೇ ಕೋಣೆಯಲ್ಲಿ ಸಂಗ್ರಹ ಮಾಡಲಾಗಿರುತ್ತದೆ.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ತಿರುಗಿ ನೋಡದೇ ಇರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳಿಲ್ಲದೇ ಪಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ಬಜೆಟ್ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರ ವೇತನ ಆಗಿರುವುದಿಲ್ಲ. ೭ತಿಂಗಳಿನಿಂದ ವಿದ್ಯುತ್ ಬಿಲ್ ಕೂಡ ಕಟ್ಟಿರುವುದಿಲ್ಲ. ಈಗಾಗಲೇ ಬಿಲ್ ಮಾಡಿ ಕಳುಹಿಸಿದ್ದು, ಅನುದಾನ ಬಿಡುಗಡೆಯಾದ ತಕ್ಷಣವೇ ವೇತನ ಬಿಲ್ ಪಾಸ್ ಮಾಡಿಸಿ ಕಾರ್ಯಕರ್ತೆಯರ ಖಾತೆಗೆ ಜಮೆ ಮಾಡಿಸಲಾಗುವುದು. ವಿದ್ಯುತ್ ಬಿಲ್ ಕೂಡ ಅನುದಾನದ ಕೊರತೆಯಿಂದ ಕಟ್ಟಲು ವಿಳಂಬವಾಗಿದ್ದು, ಆದಷ್ಟು ಬೇಗನೇ ಸರಿಪಡಿಸಲಾಗುವುದು ಎಂದು ಶಿರಹಟ್ಟಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೃತ್ಯುಂಜಯ ಗುಡ್ಡದಾನವೇರಿ ಹೇಳಿದ್ದಾರೆ.

Share this article