ನಾಳೆ ಮೈಸೂರಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ

KannadaprabhaNewsNetwork |  
Published : Oct 01, 2025, 01:00 AM IST
10 | Kannada Prabha

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯೊಂದಿಗೆ ‘ನಾಡಹಬ್ಬ’ಕ್ಕೆ ಗುರುವಾರ ತೆರೆ ಬೀಳಲಿದೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ವಿಜಯದಶಮಿ ದಿನವಾದ ಗುರುವಾರ (ಅ.2) ನಡೆಯಲಿದ್ದು, ಇದರೊಂದಿಗೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ‘ನಾಡಹಬ್ಬ’ಕ್ಕೆ ತೆರೆ ಬೀಳಲಿದೆ.ಈ ಹಿನ್ನೆಲೆಯಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗವನ್ನು ಅಂದಗೊಳಿಸುವ ಅಂತಿಮ ಹಂತದ ಕಾರ್ಯ ನಡೆಯುತ್ತಿದೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ ಮಾಡಿದೆ.

ಸಿಎಂರಿಂದ ಚಾಲನೆ:ಅ.2 ರಂದು ಮಧ್ಯಾಹ್ನ 1 ರಿಂದ 1.18 ರವರೆಗೆ ಸಲ್ಲುವ ಶುಭ ಧನುರ್‌ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿಯವರು ನಂದಿಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ಈ ಬಾರಿಯ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ನಂತರ ಸಂಜೆ 4.42 ರಿಂದ 5.06 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆ ಒಳಾವರಣದ ವಿಶೇಷ ವೇದಿಕೆಯಲ್ಲಿ, ಗಜರಾಜ ಅಭಿಮನ್ಯು ಹೊರಲಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಅರಮನೆಯ ಆವರಣದಲ್ಲಿ ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ಗೋಲ್ಟ್‌ ಕಾರ್ಡ್‌ ಹಾಗೂ ಟಿಕೆಟ್‌ ಹೊಂದಿರುವವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪುರಭವನ, ನಗರ ಬಸ್‌ ನಿಲ್ದಾಣ ಎದುರು ಪಾದಚಾರಿ ಮಾರ್ಗದಲ್ಲಿ ನಗರಪಾಲಿಕೆಯಿಂದ ಆಸನ ವ್ಯವಸ್ಥೆ ಮಾಡಲಾಗಿದೆ.

ನಂದಿಧ್ವಜ, ವೀರಗಾಸೆ, ನಾದಸ್ವರ, ನೌಫತ್‌, ನಿಶಾನೆ ಧನಂಜಯ, ನೌಫತ್‌ ಆನೆ ಗೋಪಿ, ಎನ್‌ಸಿಸಿ, ಸ್ಕೌಟ್ಸ್‌, ಗೈಡ್ಸ್‌, ವಿವಿಧ ಪೊಲೀಸ್‌ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ 58 ಸ್ತಬ್ಭ ಚಿತ್ರಗಳು, ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಕೊನೆಯಲ್ಲಿ 6ನೇ ಬಾರಿಗೆ ಅಂಬಾರಿ ಹೊತ್ತು ಗಜರಾಜ ‘ಅಭಿಮನ್ಯು’ ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಸಂಗಾತಿಗಳಾದ ‘ಕಾವೇರಿ’ ಹಾಗೂ ‘ರೂಪಾ’ ಜೊತೆ ಹೆಜ್ಜೆ ಹಾಕಲಿದ್ದಾನೆ.

ಈ ಮೆರವಣಿಗೆಯು ಐದು ಕಿ.ಮೀ.ದೂರ ಇರುವ ಬನ್ನಿಮಂಟಪ ತಲುಪಲಿದೆ. ಅಲ್ಲಿ ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಗೌರವ ವಂದನೆ ಸ್ವೀಕರಿಸುವರು. ಸಿಎಂ ಸೇರಿದಂತೆ ಸಂಪುಟದ ಹಲವು ಸದಸ್ಯರು ಪಾಲ್ಗೊಳ್ಳುವರು. ಇದರೊಂದಿಗೆ ಈ ಬಾರಿಯ ನಾಡಹಬ್ಬ ಮೈಸೂರು ದಸರೆಗೆ ತೆರೆ ಬೀಳಲಿದೆ.

ರಾಜವಂಶಸ್ಥರಿಂದ ಆಯುಧಪೂಜೆ, ವಿಜಯದಶಮಿ ಮೆರವಣಿಗೆ:ದಸರೆಯ ಆರಂಭದ ದಿನದಿಂದಲೂ ಅರಮನೆಯಲ್ಲಿ ಖಾಸಗಿ ದರ್ಬಾರ್‌ ನಡೆಸುತ್ತಿರುವ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು, ಅ.1, ಬುಧವಾರದಂದು ಅವರಮನೆಯಲ್ಲಿ ಆಯುಧಪೂಜೆ ನೆರವೇರಿಸಲಿದ್ದಾರೆ. ಅ.2, ಗುರುವಾರದಂದು ಬೆಳಗ್ಗೆ ಖಾಸಗಿಯಾಗಿ ವಿಜಯದಶಮಿ ಮೆರವಣಿಗೆ ನಡೆಸಲಿದ್ದಾರೆ. ಇದಾದ ನಂತರವೇ, ಸರ್ಕಾರಿ ದಸರಾ ಮೆರವಣಿಗೆ ಆರಂಭವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ