ಅಧ್ಯಾತ್ಮದ ಮುಂದೆ ಜಗತ್ತೇ ಶರಣಾಗುತ್ತೆ: ನಿರ್ಭಯಾನಂದ ಸರಸ್ವತಿ ಶ್ರೀ

KannadaprabhaNewsNetwork | Published : Jan 14, 2025 1:01 AM

ಸಾರಾಂಶ

ನಿರಂತರ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಂಡರೆ ಮಾತ್ರ ನಿರ್ದಿಷ್ಟ ಸಾಧನೆಯ ಜಗತ್ತೇ ನಿಮ್ಮದಾಗುತ್ತದೆ.

ಬಳ್ಳಾರಿ: ಭಾರತೀಯರಿಗೆ ಋಷಿ ಮುನಿಗಳ ಪರಂಪರೆಯಿದೆ. ಭಾರತೀಯರು ಏನನ್ನಾದರೂ ಸಾಧಿಸಬಲ್ಲರು. ಸಾಧಿಸಬಲ್ಲ ತಾಕತ್ತು ಇರುವುದು ಭಾರತೀಯರಿಗೆ ಮಾತ್ರ. ಸಾಧನೆಯ ಹಾದಿಯತ್ತ ಕ್ರಮಿಸಿ, ನಿರಂತರ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಂಡರೆ ಮಾತ್ರ ನಿರ್ದಿಷ್ಟ ಸಾಧನೆಯ ಜಗತ್ತೇ ನಿಮ್ಮದಾಗುತ್ತದೆ ಎಂದು ಗದುಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಜರುಗಿದ ವಿವೇಕ ತೋರಣ ಉಪನ್ಯಾಸದಲ್ಲಿ ವಿವೇಕಾನಂದರ ಬದುಕು ಹಾಗೂ ಸಾಧನೆಯ ಕುರಿತು ವಿವರಿಸಿದರು.

ಭಾರತೀಯರು ಸಿಂಹದ ಮರಿಗಳು. ಆದರೆ, ಇವರಿಗೆ ತಮ್ಮ ಶಕ್ತಿ ಬಗ್ಗೆ ತಮಗೇ ಅರಿವಿಲ್ಲ. ಹೀಗಾಗಿಯೇ ಕುರಿಮರಿಗಳಂತೆ ಬದುಕುತ್ತಿದ್ದಾರೆ. ಭಾರತೀಯರ ಶಕ್ತಿ ಹಾಗೂ ತಾಕತ್ತು ಸ್ವಾಮಿ ವಿವೇಕಾನಂದರಿಗೆ ತಿಳಿದಿತ್ತು. ಭಾರತೀಯರ ಆಧ್ಯಾತ್ಮಿಕ ಶಕ್ತಿಯ ಮನವರಿಕೆ ಅವರಿಗಿತ್ತು. ಹೀಗಾಗಿಯೇ, ದೇಶಾದ್ಯಂತ ಸಂಚಾರ ಮಾಡಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಿದರು ಎಂದರು.

ಪ್ರತಿಯೊಬ್ಬರೂ ಆತ್ಮಜ್ಞಾನ ಪಡೆಯಬೇಕು. ನಾನು ಯಾರು? ಇಲ್ಲಿಗೇಕೆ ಬಂದೆ? ನಾನು ಏನಾಗಿದ್ದೆ? ಈಗ ಏನಾಗಿದ್ದೇನೆ ಎಂಬುದನ್ನು ತಿಳಿಯಬೇಕು. ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಇದು ಸಾಧ್ಯ. ಒಳಗಿರುವ ಆತ್ಮವೇ ಸತ್ಯವಾಗಿದ್ದು, ಸತ್ಯದ ಬೆಳಕಿನ ಸಚ್ಚಿದಾನಂದ ಸ್ಥಿತಿಗೆ ತಲುಪಬೇಕು. ಸಾಮಾನ್ಯ ಮನುಷ್ಯ ಯಾವುದಕ್ಕೋ ಆಕರ್ಷಿತನಾಗಿದ್ದಾನೆ. ಹೀಗಾಗಿಯೇ ಸತ್‌-ಚಿತ್‌-ಆನಂದದ ಪ್ರಜ್ಞೆಯಿಂದ ಬಹಳ ದೂರವಾಗಿದ್ದಾನೆ ಎಂದು ತಿಳಿಸಿದರು.

ಇನ್ಮುಂದೆ ವಿಶ್ವ ಸಂಸ್ಕೃತಿ ಸಾಮರಸ್ಯದ ಸಂಸ್ಕೃತಿಯಾಗಲಿದೆ. ಯಾವ ದೇಶಗಳೂ ತನ್ನಿಂದ ತಾನು ಬದುಕಲಾರವು. ಯಾವ ಧರ್ಮವೂ ತನ್ನಿಂದ ತಾನು ಬದುಕಲಾರದು. ಯಾವುದೇ ಜನರು ತಮ್ಮಿಂದ ತಾವು ಬದುಕಲಾರರು. ಎಷ್ಟೇ ಶಕ್ತಿಶಾಲಿ ದೇಶಗಳಾದರೂ ಮತ್ತೊಂದು ದೇಶ ಪರಾವಲಂಬಿಯಾಗಬೇಕು. ಈ ಮಾತನ್ನು ಈ ಹಿಂದೆಯೇ ಸ್ವಾಮಿ ವಿವೇಕಾನಂದರು ಹೇಳಿದ್ದರು. ಭಾರತ ಹೊರತುಪಡಿಸಿದರೆ ಮುಂದುವರಿದ ಅನೇಕ ರಾಷ್ಟ್ರಗಳು ಖಿನ್ನತೆಯಿಂದ ಬಳಲುತ್ತಿವೆ. ಭಾರತೀಯರು ಆಧ್ಯಾತ್ಮ, ಧ್ಯಾನ, ಯೋಗಗಳಿಂದ ಖಿನ್ನತೆಯನ್ನು ದೂರ ಮಾಡಿಕೊಳ್ಳುತ್ತಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಖಿನ್ನತೆಯ ಕುರಿತೇ ಅಧ್ಯಯನಗಳು ನಡೆಯುತ್ತಿವೆ. ಭಾರತೀಯ ಸ್ವಾಮೀಜಿಗಳು, ಸಂತರು ಹಾರ್ವರ್ಡ್‌ಗೆ ತೆರಳಿ ಉಪನ್ಯಾಸಗಳ ಮೂಲಕ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ಶ್ರೀಗಳು ತಿಳಿಸಿದರು.

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಕೆ.ಜಿ. ತಿಮ್ಮಾರೆಡ್ಡಿ, ವೈದ್ಯ ಡಾ. ಧರ್ಮರೆಡ್ಡಿ ಉಪಸ್ಥಿತರಿದ್ದರು. ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ರಾಘವೇಂದ್ರ ಗುಡದೂರು ಮತ್ತು ತಂಡದವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದರು. ವೀರೇಶ್ ಕುರುಗೋಡು ತಬಲಾ ಸಾಥ್ ನೀಡಿದರು.

Share this article