ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಇಳುವರಿ ಕುಂಠಿತ

KannadaprabhaNewsNetwork |  
Published : Nov 08, 2023, 01:02 AM IST
ರಾಣಿಬೆನ್ನೂರು ಎಪಿಎಂಸಿಯಲ್ಲಿ ಮೆಕ್ಕೆಜೋಳವನ್ನು ಸಂಗ್ರಹ ಮಾಡಿರುವುದು. | Kannada Prabha

ಸಾರಾಂಶ

ಮಳೆ ಕೊರತೆ, ಲದ್ದಿ ಹುಳು ಕಾಟದಿಂದ ಈ ಬಾರಿ ತಾಲೂಕಿನ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಕಡಿಮೆ ಪ್ರಮಾಣದಲ್ಲಿ ಇಳುವರಿ ಬಂದಿದ್ದು, ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಕೂಡ ಬಂದಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಮಳೆ ಕೊರತೆ, ಲದ್ದಿ ಹುಳು ಕಾಟದಿಂದ ಈ ಬಾರಿ ತಾಲೂಕಿನ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಕಡಿಮೆ ಪ್ರಮಾಣದಲ್ಲಿ ಇಳುವರಿ ಬಂದಿದ್ದು, ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಕೂಡ ಬಂದಿದೆ.

ಸದ್ಯ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ ₹2300 ವರೆಗೂ ಬೆಲೆ ಬಂದಿದ್ದು, ಮಾರಾಟ ಜೋರಾಗಿಯೇ ನಡೆದಿದೆ. ಮಳೆ ಕೊರತೆ, ಲದ್ದಿ ಹುಳುಗಳ ಕಾಟದ ನಡುವೆಯೂ ನಾನಾ ಕಸರತ್ತು ನಡೆಸಿ ಮೆಕ್ಕೆಜೋಳ ಉಳಿಸಿಕೊಂಡ ರೈತರ ಪಾಲಿಗೆ ವರದಾನವಾಗಿದೆ.

ರೈತರು ಮೆಕ್ಕೆಜೋಳವನ್ನು ತಮ್ಮ ಜಮೀನು ಅಥವಾ ಒಣಗಿಸಲು ಹಾಕಿದ ಸ್ಥಳದಿಂದಲೇ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದು ಖರೀದಿಸುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ ಬಹುತೇಕ ರೈತರು ಮೆಕ್ಕೆಜೋಳ ಬೆಳೆ ಮಾರಾಟಕ್ಕೆ ಮುಂದಾಗಿದ್ದು, ಪ್ರತಿ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2100ರಿಂದ 2300 ವರೆಗೂ ಮಾರಾಟವಾಗುತ್ತಿದೆ.

ಅಳಿದುಳಿದ ಮೆಕ್ಕೆಜೋಳಕ್ಕೆ ಬೆಲೆ:

ತಾಲೂಕಿನಲ್ಲಿ ನೀರಾವರಿ ಮಾಡಿಕೊಂಡು 20 ಸಾವಿರ ಹಾಗೂ ಮಳೆ ಆಶ್ರಿತ ಪ್ರದೇಶದಲ್ಲಿ 24 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ, ಪ್ರಸಕ್ತ ವರ್ಷ ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆ ಬಹಳಷ್ಟು ರೈತರು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜಗಳು ಮೊಳಕೆಯೊಡೆಯುವ ಮುನ್ನವೇ ಹಾಳಾಗಿ ಹೋಗಿದ್ದವು. ಅಲ್ಲದೆ ಕೆಲವರು ಬೆಳೆದ ಮೆಕ್ಕೆಜೋಳ ತೆನೆ ಕಟ್ಟಿದ್ದರೂ ಮಳೆ ಕೊರತೆಯಿಂದ ಒಣಗಿ ಹಾಳಾಗಿವೆ. ಇದರ ನಡುವೆಯೂ ನೀರಾವರಿ ಮಾಡಿಕೊಂಡು ಹಾಗೂ ಕೀಟ ಬಾಧೆಯಿಂದ ಬೆಳೆ ಉಳಿಸಿಕೊಂಡ ರೈತರಿಗೆ ಸದ್ಯ ಮೆಕ್ಕೆಜೋಳ ಅದೃಷ್ಟ ತಂದಿದೆ.

ಉತ್ತಮ ಬೆಲೆ:2022ರ ಸೆಪ್ಟಂಬರ್‌ನಿಂದ ಡಿಸೆಂಬರ್ ತಿಂಗಳವರೆಗೂ ಮೆಕ್ಕೆಜೋಳದ ಬೆಲೆ ಸಂಪೂರ್ಣ ಕುಸಿತ ಕಂಡಿತ್ತು. ಆ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಮಾರುಕಟ್ಟೆಗೆ ಬಂದ ಕಾರಣ ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ ₹900 ಹಾಗೂ 800 ವರೆಗೂ ಇಳಿಕೆಯಾಗಿತ್ತು. ಆಗ ರೈತರು ₹1,600 ಗೆ ಕ್ವಿಂಟಾಲ್‌ನಂತೆ ದರ ನಿಗದಿ ಪಡಿಸಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ಹೋರಾಟ ಸಹ ಮಾಡಿದ್ದರು. ಆದರೀಗ ಮೆಕ್ಕೆಜೋಳಕ್ಕೆ ಭಾರಿ ಬೇಡಿಕೆ ಬಂದಿದ್ದು, ಒಂದು ಕ್ವಿಂಟಲ್‌ಗೆ 2300 ರು. ವರೆಗೂ ಮಾರಾಟವಾಗುತ್ತಿದೆ.

ಮೆಕ್ಕೆಜೋಳ ಫಸಲು ಕಡಿಮೆ ಪ್ರಮಾಣದಲ್ಲಿ ಬಂದಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಖರೀದಿದಾರರು ಬಂದು ಖರೀದಿ ಮಾಡುತ್ತಿರುವ ಕಾರಣ ಬೆಲೆ ಏರಿಕೆಯಾಗಿದೆ. ರೈತರು ಎಪಿಎಂಸಿ ಅಥವಾ ಒಣಹಾಕಿದ ಸ್ಥಳದಿಂದ ಮೆಕ್ಕೆಜೋಳವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ರಾಣಿಬೆನ್ನೂರು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಪರಮೇಶ ನಾಯ್ಕ.ನೀರಾವರಿ ಮಾಡಿಕೊಂಡು ಮೆಕ್ಕೆಜೋಳ ಬೆಳೆದಿದ್ದೇವೆ. ಬೆಳೆ ಮಾರಾಟಕ್ಕೆ ಬರುವ ಸಮಯಕ್ಕೆ ಲದ್ದಿ ಹುಳು ಕಾಟದಿಂದ ಕೊಂಚ ಇಳುವರಿ ಕಡಿಮೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿರುವ ಕಾರಣ ನೆಮ್ಮದಿ ಉಂಟಾಗಿದೆ ಎನ್ನುತ್ತಾರೆ ಮೆಕ್ಕೆಜೋಳ ಬೆಳೆಗಾರ ಮಲ್ಲಪ್ಪ ನೇಶ್ವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ