ಇಡೀ ಜಗತ್ತಿಗೆ ಯೋಗವನ್ನು ಬಳುವಳಿಯಾಗಿ ನೀಡಿದ ಭಾರತದಿಂದಲೇ ಇಂದು ಯೋಗ ಜಾಗತಿಕವಾಗಿ 177 ದೇಶಗಳಿಗೆ ವ್ಯಾಪಿಸಿದೆ. ಇದು ಕೇವಲ ದೈಹಿಕ ವ್ಯಾಯಾಮ ಮಾತ್ರ ಆಗಿರದೇ, ದೇಹ, ಮನಸ್ಸು, ಆತ್ಮವನ್ನು ಒಂದಾಗಿಸುವ ಸಂಪೂರ್ಣ ಜೀವನ ಪದ್ಧತಿಯಾಗಿದೆ ಎಂದು ಕರ್ನಾಟಕ ಯೋಗಾಸನ ಕ್ರೀಡಾ ಸಂಘದ ಅಧ್ಯಕ್ಷ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ಎಲ್. ರಾಯ್ಕರ್ ತಿಳಿಸಿದ್ದಾರೆ.
- ಯೋಗವು ದೇಹ, ಮನಸ್ಸು, ಆತ್ಮವನ್ನು ಒಂದಾಗಿಸುವ ಸಂಪೂರ್ಣ ಜೀವನ ಪದ್ಧತಿ: ವಾಸುದೇವ ರಾಯ್ಕರ್
- ದಿವ್ಯಾಂಗರಿಗೆ ಬ್ರಹ್ಮಕುಮಾರಿ ಸಂಸ್ಥೆಯಿಂದ ವಿಶೇಷ ರಾಜಯೋಗ ಧ್ಯಾನ ಶಿಬಿರ: ಬ್ರಹ್ಮಕುಮಾರಿ ಲೀಲಾಜಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಡೀ ಜಗತ್ತಿಗೆ ಯೋಗವನ್ನು ಬಳುವಳಿಯಾಗಿ ನೀಡಿದ ಭಾರತದಿಂದಲೇ ಇಂದು ಯೋಗ ಜಾಗತಿಕವಾಗಿ 177 ದೇಶಗಳಿಗೆ ವ್ಯಾಪಿಸಿದೆ. ಇದು ಕೇವಲ ದೈಹಿಕ ವ್ಯಾಯಾಮ ಮಾತ್ರ ಆಗಿರದೇ, ದೇಹ, ಮನಸ್ಸು, ಆತ್ಮವನ್ನು ಒಂದಾಗಿಸುವ ಸಂಪೂರ್ಣ ಜೀವನ ಪದ್ಧತಿಯಾಗಿದೆ ಎಂದು ಕರ್ನಾಟಕ ಯೋಗಾಸನ ಕ್ರೀಡಾ ಸಂಘದ ಅಧ್ಯಕ್ಷ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ಎಲ್. ರಾಯ್ಕರ್ ತಿಳಿಸಿದರು.
ನಗರದ ಹೊರವಲಯದ ವಡ್ಡಿನಹಳ್ಳಿ ಗ್ರಾಮದ ದಾವಣಗೆರೆ ಸಂಯೋಜಿತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)ದಲ್ಲಿ ಭಾನುವಾರ ‘ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ’ ಎಂಬ ಧ್ಯೇಯವಾಕ್ಯದೊಂದಿಗೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮನಸ್ಸು, ದೇಹ, ಆತ್ಮವನ್ನು ಒಂದಾಗಿಡುವ ಜೀವನ ಪದ್ಧತಿಯೇ ಯೋಗವಾಗಿದೆ. ಇಡೀ ವಿಶ್ವವೇ ಈಗ ಯೋಗದ ಮೊರೆ ಹೋಗುತ್ತಿರುವುದು ಆಶಾದಾಯಕ ಸಂಗತಿ ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗಕಲೆಯನ್ನು ಇಂದು ಜಗತ್ತಿನ 177 ದೇಶಗಳಲ್ಲಿ ಜನರು ಅಭ್ಯಾಸ ಮಾಡುತ್ತಿದ್ದಾರೆ. ನಾವು ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ದೈಹಿಕ ಸದೃಢತೆ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ, ನೆನಪಿನ ಶಕ್ತಿವೃದ್ಧಿಯಾಗುತ್ತದೆ. ಎಲ್ಲ ರೋಗಗಳು ದೂರವಾಗುತ್ತವೆ. ಇಂದು ಜಗತ್ತನ್ನು ಕಾಡುತ್ತಿರುವ ಮಾನಸಿಕ ಖಿನ್ನತೆ, ಏಕಾಗ್ರತೆ ಕೊರತೆಯಂತಹ ಸಮಸ್ಯೆಗಳಿಗೆ ಧ್ಯಾನ, ಯೋಗಾಭ್ಯಾಸ ರಾಮಬಾಣವಾಗಿದೆ ಎಂದು ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬ್ರಹ್ಮಕುಮಾರೀಸ್ ಕೇಂದ್ರದ ಉಸ್ತುವಾರಿ ಬ್ರಕ್ಮಕುಮಾರಿ ಲೀಲಾಜಿ ಮಾತನಾಡಿ, ಸಕಾರಾತ್ಮಕ ಜೀವನ ವಿಷಯದಿಂದ ದೂರವಿದ್ದು, ಆಧ್ಯಾತ್ಮಿಕದ ಕಡೆಗೆ ಗಮನ ಕೇಂದ್ರೀಕರಿಸಬೇಕು. ಆರೋಗ್ಯಕರ ವೃದ್ಧಾಪ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಸಕಾರಾತ್ಮಕ ಚಿಂತನೆ, ಆಂತರಿಕ ಶಾಂತಿ ಮತ್ತು ಮಾನಸಿಕ ಯೋಗಕ್ಷೇಮದ ಅಗತ್ಯತೆ ಎಲ್ಲರೂ ಅರಿಯಲಿ. ನಿತ್ಯ ಯೋಗ ಮಾಡುವುದರಿಂದ ವ್ಯಕ್ತಿ ಆರೋಗ್ಯವಂತನಾಗಿರುವುದಷ್ಟೇ ಅಲ್ಲದೇ, ಸದೃಢನಾಗಿರುತ್ತಾನೆ. ಹಾಗಾಗಿ, ನಿತ್ಯವೂ ತಪ್ಪದೇ ಎಲ್ಲರೂ ಯೋಗ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿಆರ್‌ಸಿ ಕೇಂದ್ರದ ಪ್ರಭಾರ ನಿರ್ದೇಶಕ ಕೆ.ಮಾರುತಿಕೃಷ್ಣ ಗೌಡ ಮಾತನಾಡಿ, ಆನ್‌ಲೈನ್‌ನಲ್ಲಿ ಯೋಗ ನಡೆಯುತ್ತಿದೆ. ನಾವೆಲ್ಲರೂ ಯೋಗ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದೋಣ. 14 ದಿನಗಳ ಕಾಲ ನಿರಂತರ ತರಬೇತಿ ನೀಡಲಾಗುವುದು. ಯೋಗದಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗುತ್ತದೆ. ಯೋಗಾಭ್ಯಾಸದಿಂದಾಗಿ ದೇಹ ಸಮತೋಲನ ಸ್ಥಿತಿ ಉತ್ತಮವಾಗುತ್ತದೆ. ಸಾಮಾನ್ಯ ಮನುಷ್ಯರಿಗಿಂತ ದಿವ್ಯಾಂಗ ಮಕ್ಕಳಿಗೆ ಯೋಗ ಉತ್ತಮ ಸಹಕಾರಿ. ದಿವ್ಯಾಂಗರಿಗಾಗಿ ಬ್ರಹ್ಮಕುಮಾರೀಸ್ ಸಂಸ್ಥೆಯಿಂದ ರಾಜಯೋಗ ಧ್ಯಾನದ ಬಗ್ಗೆ ಶಿಬಿರ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಪ್ರಾಚೀನ ಋಷಿಮುನಿಗಳ ಕೊಡುಗೆಯಾದ ಯೋಗದಿಂದ ಉತ್ತಮ ಆರೋಗ್ಯ ಪಡೆಯಬಹುದು. ಬದಲಾದ ಕಾಲಘಟ್ಟದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿ ಮೊಬೈಲ್ ನಮ್ಮ ಸಂಗಾತಿಯೆಂಬಂತಾಗುತ್ತಿದೆ. ಇದರಿಂದ ನಮ್ಮತನ ಉಳಿಯದಾಗಿದೆ. ನಮ್ಮತನವನ್ನು ನಾವು ಮರೆಯಬಾರದು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಯೋಗ ವಿಶ್ವವ್ಯಾಪಿಯಾಗುತ್ತಿದೆ. ನಮ್ಮತನವನ್ನು ಬೆಳೆಸಿಕೊಂಡರೆ ಭಾರತ ವಿಶ್ವಗುರುವಾಗಿ ಬೆಳೆಯುವುದರಲ್ಲೆ ಎರಡು ಮಾತಿಲ್ಲ ಎಂದು ಹೇಳಿದರು.
ಯೋಗ ಗುರು ಡಾ. ಎನ್.ಪರಶುರಾಮ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ದೈಹಿಕ ವ್ಯಾಯಾಮವಷ್ಟೇ ಅಲ್ಲ, ದೇಹ, ಮನಸ್ಸು ಮತ್ತು ಉಸಿರಾಟ ಸಮತೋಲನದಲ್ಲಿಡುವ ಸಮಗ್ರ ಜೀವನಶೈಲಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ, ಸಿಆರ್‌ಸಿ ಕೇಂದ್ರದ ಪುನರ್ವಸತಿ ಅಧಿಕಾರಿ ವಿ. ಕನಕ ಸಭಾಪತಿ ಮಾತನಾಡಿದರು. ಶ್ರೀನಾಥ, ಯೋಗ ಪ್ರದರ್ಶಕ ಪ್ರಭುಸ್ವಾಮಿ, ಸಿಆರ್‌ಸಿ ಅಧ್ಯಾಪಕರಾದ ಸುಮಂಗಲಾ ನಡುವಿನಮನಿ, ಎನ್.ಎಸ್. ಸೌಮ್ಯ ಇತರರು ಇದ್ದರು.
ಇದೇ ವೇಳೆ 21 ಹಿರಿಯ ನಾಗರೀಕರಿಗೆ ಒಟ್ಟು 78 ಸಹಾಯಕ ಸಾಧನ ವಿತರಿಸಲಾಯಿತು. ಹಿರಿಯ ನಾಗರೀಕರು, ಅಂಗವಿಕಲರು, ಆರೈಕೆದಾರರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 120 ಜನ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಯೋಗದ ಮಹತ್ವ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಪಡೆದರು.
- - -
-21ಕೆಡಿವಿಜಿ1:
ವಡ್ಡಿನಹಳ್ಳಿ ಗ್ರಾಮದ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ ಭಾನುವಾರ ಯೋಗ ದಿನಾಚರಣೆ ಸಮಾರಂಭದಲ್ಲಿ ದಿವ್ಯಾಂಗರಿಗೆ ಬ್ರಹ್ಮಕುಮಾರಿ ಲೀಲಾಜಿ, ವಾಸುದೇವ ರಾಯ್ಕರ್, ಮಾರುತಿಕೃಷ್ಣ ಗೌಡ ಸಲಕರಣೆ ವಿತರಿಸಿದರು. -21ಕೆಡಿವಿಜಿ2: ವಡ್ಡಿನಹಳ್ಳಿಯ ಸಂಯೋಜಿತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)ದಲ್ಲಿ ಭಾನುವಾರ ವಿಶ್ವ ಯೋಗ ದಿನಾಚರಣೆಯಲ್ಲಿ ಬ್ರಹ್ಮಕುಮಾರಿ ಲೀಲಾಜಿ, ವಾಸುದೇವ ರಾಯ್ಕರ್, ಮಾರುತಿಕೃಷ್ಣ ಗೌಡ ಇತರರು ಯೋಗ ಕೈಪಿಡಿ ಬಿಡುಗಡೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.