ಗದಗ: ಅನುಭವದಲ್ಲಿ ಅಮೃತವಿದೆ ಎನ್ನುವ ಗಾಧೆ ಮಾತಿನಂತೆ ನಮ್ಮ ಜೀವನ ಪರಿಪಕ್ವವಾಗಲು ಅನುಭವ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿರಿಯ ನಾಗರಿಕರು ನಮ್ಮ ದೇಶಕ್ಕೆ ನೀಡಿರುವ ಕೊಡುಗೆ ಸ್ಮರಿಸಬೇಕಾಗಿದೆ. ಹಿರಿಯರನ್ನು ಗೌರವ ಮತ್ತು ಭಕ್ತಿಯಿಂದ ಕಾಣುವುದು ನಮ್ಮ ಸಂಪ್ರದಾಯವಾಗಿದೆ. ಜನ್ಮ ಕೊಟ್ಟ ತಂದೆ ತಾಯಿಗಳ ಪಾಲನೆ ಪೋಷಣೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ. ಹಿರಿಯರು ಅನುಭವದ ಭಂಡಾರವಾಗಿದ್ದಾರೆ. ಹಿರಿಯ ನಾಗರಿಕರಿಗೆ ವಯೋಸಹಜವಾಗಿ ಕೆಲವು ದೈಹಿಕ ತೊಂದರೆ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಾಗುತ್ತದೆ. ಹಿರಿಯ ನಾಗರಿಕರು ತಮ್ಮ ಶಕ್ತ್ಯಾನುಸಾರವಾಗಿ ಪ್ರತಿನಿತ್ಯ ಯೋಗ ಹಾಗೂ ಸಣ್ಣ ಪುಟ್ಟ ವ್ಯಾಯಾಮ ರೂಢಿಸಿಕೊಳ್ಳಬೇಕು. ಸರ್ಕಾರದಿಂದ ಅನೇಕ ಯೋಜನೆ ಜಾರಿಯಾಗಿದ್ದು ಅವುಗಳ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಚ್. ಬೇಲೂರ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಹಿರಿಯ ನಾಗರಿಕರ ಹುಮ್ಮಸ್ಸು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಹಿರಿಯ ನಾಗರಿಕರು ಯಾವಾಗಲೂ ವಿಶ್ವಾಸ ಹಾಗೂ ಶ್ರದ್ಧೆ ಕಳೆದುಕೊಳ್ಳಬಾರದು ಎಂದು ತಿಳಿಸಿದರು.ಈ ವೇಳೆ 80ಕ್ಕಿಂತ ಹೆಚ್ಚಿನ ವಯೋಮಿತಿಯ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಜಿ.ಎಫ್. ಉಪನಾಳ ಟ್ರಸ್ಟ್ ಶಾಂತಿಧಾಮ ವೃದ್ಧಾಶ್ರಮದ ಅಧ್ಯಕ್ಷ ಪ್ರಕಾಶ ಉಪನಾಳ, ನಿವೃತ್ತ ಸರ್ಕಾರಿ ನೌಕರರ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಬಿ.ಎಂ. ಬಿಳಿಯಲಿ, ಬಿ.ಎ. ವಸ್ತ್ರದ, ವಿ.ಎಂ. ಮುಂದಿನಮನಿ, ಜಿ.ಎ. ಮಾಲಗಿತ್ತಿಮಠ, ಎ.ಎನ್. ಬಸ್ತಿ, ಎಂ.ಸಿ. ವಗ್ಗಿ, ಬಿ.ಎಸ್. ತೋಟಗೇರ, ಐ.ಕೆ. ಕಮ್ಮಾರ, ಅಂದಾನೆಪ್ಪ ವಿಭೂತಿ ಸೇರಿದಂತೆ ಹಿರಿಯ ನಾಗರಿಕರು ಇದ್ದರು.ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು. ಪ್ರಕಾಶ ಗಾಣಿಗೇರ ವಂದಿಸಿದರು.