ಪಾವಗಡ: ಸತತ ಮಳೆಯ ಅಭಾವದಿಂದ ಬೇಸಿಗೆಯ ಬರ ವ್ಯಾಪಕವಾಗಿದ್ದು, ತಾಲೂಕಿನಾಧ್ಯಂತ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಪರದಾಟ ಸೃಷ್ಟಿಯಾಗಿದೆ. ನೀರು ಸಿಗದೇ ದಾಹದಿಂದ ಅನೇಕ ಪಕ್ಷಿಗಳು ತಮ್ಮ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ಅರ್ಮಿ ಭರತ್ ಹಾಗೂ ತಂಡದವರು ಭಾನುವಾರ 190ಕ್ಕೂ ಅಧಿಕ ಪ್ಲಾಸ್ಟಿಕ್ ಬಾಟಲುಗಳಲ್ಲಿ ನೀರು ತುಂಬಿಸಿ ತಂತಿಯ ಸಹಾಯದಿಂದ ಮರಗಿಡಗಳಿಗೆ ಕಟ್ಟಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಹಲವು ಯುವಕರು ಸೇರಿ ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್ ಗಳನ್ನು ಕತ್ತರಿಸಿ, ಬಾಟಲ್‌ಗಳಿಗೆ ನೀರು ತುಂಬುವ ಮೂಲಕ ಮರಕ್ಕೆ ಕಟ್ಟಿ ಪಕ್ಷಿಗಳ ಮತ್ತು ಸಣ್ಣ ಪ್ರಾಣಿಗಳ ದಾಹವನ್ನು ನೀಗಿಸಲು ಮುಂದಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಮಿ ಭರತ್ ಸೇರಿ ನಿರಂಜನ್ ,ಧನುಷ್ ,ಪುನೀತ್ ,ಬಾಬಾ ಹಾಗೂ ಇತರೆ ಆನೇಕ ಯುವಕರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.