ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಬಸವ ಕೇಂದ್ರ ಮುರುಘರಾಜೇಂದ್ರ ಬೃಹನ್ಮಠ, ಶರಣ ಸಾಹಿತ್ಯ ಪರಿಷತ್, ಮುಕ್ತ ವೇದಿಕೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಜಿ.ಎನ್ ಮಲ್ಲಿಕಾರ್ಜುನಪ್ಪ ಅವರ ವಿರಚಿತ ಜಯದೇವ ಸಿರಿ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಟಕಗಳು ಸರಾಗವಾಗಿ ಜನರನ್ನು ತಲುಪುತ್ತದೆ. ಪಂಪ, ಜನ್ನರಿಂದ ಹಿಡಿದು ಇಂದಿನ ಎಲ್ಲ ನಾಟಕಕಾರರು ಕೂಡ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಬಾನುಲಿ ಇಂತಹ ಅನೇಕ ಪ್ರಕಾರಗಳ ನಾಟಕಗಳನ್ನು ನಾವು ನೋಡಬಹುದಾಗಿದೆ. ಜಯದೇವ ಶ್ರೀ ನಾಟಕದ ರಂಗಪಠ್ಯ ಅಬಾಲವೃದ್ಧರಿಂದ ಹಿಡಿದು ಎಲ್ಲರನ್ನೂ ಜಾಗೃತಿ ಮಾಡುತ್ತದೆ. ಇದರ ರಂಗ ಪ್ರಯೋಗ ತುರ್ತಾಗಿ ಆಗಬೇಕಿದೆ ಎಂದರು. 12ನೇ ಶತಮಾನದಲ್ಲಿ ಎಲ್ಲಾ ಬಸವಾದಿ ಶರಣರು ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದಾರೆ. ಇದಕ್ಕಾಗಿ ಅವರು ಏನೆಲ್ಲಾ ತೊಂದರೆಗಳನ್ನು ಮೆಟ್ಟಿನಿಂತು ಪರಿವರ್ತನಾಕಾರರಾಗಿದ್ದಾರೆ ಎಂಬುದನ್ನು ನಾಟಕದಲ್ಲಿ ಚಿತ್ರಿಸಿದ್ದಾರೆ. ಮುರುಘಾ ಪರಂಪರೆಯಲ್ಲಿ ಜಯದೇವ ಶರಣರ ಆರಂಭದ ಕಾಲಘಟ್ಟದಿಂದ 24ನೇ ಪೀಠಾಧ್ಯಕ್ಷರಾದ ಮೇಲೆ ಅನೇಕ ಘಟನಾವಳಿಗಳನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ವೈದಿಕಶಾಹಿಗಳ ಕುತಂತ್ರಗಳು ಪ್ರಾಚೀನ ಕಾಲದಿಂದಲೂ ಹೇಗೆಲ್ಲಾ ನಡೆಯುತ್ತಿದ್ದವು ಎಂಬುದನ್ನು ಕಾಣಬಹುದಾಗಿದೆ. ಮಹಾತ್ಮರನ್ನು ಭೇಟಿ ಮಾಡುವ ದೃಶ್ಯಗಳನ್ನು ಇಲ್ಲಿ ತುಂಬಾ ಅದ್ಭುತವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಸಾಹು ಮಹಾರಾಜರು, ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾತ್ಮಗಾಂಧಿ ಅವರ ಭೇಟಿಯ ಸಂದರ್ಭದ ಸಂಭಾಷಣೆಗಳು ಮುಖ್ಯವಾದವುಗಳು. ಈ ಮೂವರ ಭೇಟಿಯ ಚಿತ್ರಣಗಳೇ ಈ ನಾಟಕದ ಜೀವಾಳ ಆಗಿದೆ. ಅನ್ನ ಮತ್ತು ಅಕ್ಷರಗಳ ದಾಸೋಹಕ್ಕೆ ಶಾಹು ಮಹಾರಾಜರು ಮಹಾರಾಷ್ಟ್ರದಲ್ಲಿ ಹಾಸ್ಟೆಲ್ ಪ್ರಾರಂಭ ಮಾಡಲು ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದರು.ಗಾಂಧೀಜಿ, ಶಾಹು ಮಹಾರಾಜ್, ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಈ ನಾಟಕದ ಕೇಂದ್ರ ಬಿಂದುಗಳು. ಗುರುಗಳೇ ರಾಜರಿಗೆ ಕಾಣಿಕೆ ಕೊಡುವ ಸನ್ನಿವೇಶ ಇಲ್ಲಿದೆ. ಸ್ವಾಮೀಜಿಗಳಿಗೆ ಭಕ್ತರು ಹಣ, ದವಸ, ಧಾನ್ಯಗಳನ್ನು ನೀಡುತ್ತಾರೆ. ಆದರೆ, ರಾಜರಿಗೆ ಕೊಡುವುದು ಕಡಿಮೆ. ಆದ್ದರಿಂದ ರಾಜರಿಗೂ ಸಹಾಯ ಹಸ್ತ ನೀಡಿದ್ದ ಅಂಶ ನಾಟಕದಲ್ಲಿ ಚಿತ್ರಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬಸವ ಜಯಂತಿ ಆಚರಣೆ ಶುರು ಮಾಡಿದ್ದ ಹರ್ಡೇಕರ್ ಮಂಜಪ್ಪನವರಿಗೆ ನೈತಿಕವಾಗಿ ಸೇರಿದಂತೆ ಎಲ್ಲಾ ರೀತಿಯ ಸಹಕಾರನ್ನು ಜಯದೇವ ಶ್ರೀಗಳು ನೀಡಿದ್ದರು. ಮಠದ ಆವರಣದ ಎಡ ಮತ್ತು ಬಲಭಾಗದಲ್ಲಿ ಜಯದೇವ ಶ್ರೀಗಳು ಮತ್ತು ಅಥಣಿ ಶಿವಯೋಗಿಗಳ ಪ್ರತಿಮೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಜಯದೇವ ಶ್ರೀಗಳ ಸಾಮಾಜಿಕ ಕಾರ್ಯಗಳ ಕುರಿತು ಇನ್ನೂ ಹೆಚ್ಚು ತಿಳಯಬೇಕಿದೆ. ಅವರ ಕಾರ್ಯಗಳ ನೆನೆದರೆ ಭಕ್ತರ ಕಣ್ಣಂಚಲ್ಲಿ ನೀರು ತರಿಸುತ್ತದೆ. ಅಷ್ಟು ಕಾರ್ಯ ಮಾಡಿದ್ದಾರೆ ಎಂದರು. ಕೃತಿಕಾರ ಡಾ. ಜಿ.ಎನ್ ಮಲ್ಲಿಕಾರ್ಜುನಪ್ಪ ಮಾತನಾಡಿ, ನಾವು ರಚಿಸುವ ಕೃತಿಗಳು ಬಹಳಷ್ಟು ಜನರಿಗೆ ತಲುಪಬೇಕಿದೆ. ಜೀವಪರ ಆಲೋಚನೆಯುಳ್ಳ ಸುಧಾರಕರು, ಸಮಾಜ ಪರಿವರ್ತಕರ ಆಶಯಗಳನ್ನು ಪ್ರಸ್ತುತ ಕಾಲಕ್ಕೆ ತಿಳಿಯಪಡಿಸುವ ತುರ್ತು ಇದೆ ಎಂದರು.