ಗದಗ: ರಂಗಭೂಮಿ ಕಲೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. ಚಲನಚಿತ್ರದ ಅದ್ಭುತ ನಟ-ನಟಿಯರು ರಂಗಭೂಮಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.ಇತ್ತಿಚಿನ ದಿನಮಾನಗಳಲ್ಲಿ ರಂಗಭೂಮಿ ಕಲೆ ಅಳಿವಿನಂಚಿನಲ್ಲಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರಯೊಬ್ಬರ ಮೇಲಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಡಾ. ಕಲ್ಲಯ್ಯಜ್ಜನವರು ಹೇಳಿದರು.
ಶ್ರೀಪುಟ್ಟರಾಜ ಕಲಾ ಪೋಷಕ ಸಂಘದ ಅಧ್ಯಕ್ಷ ಎಫ್.ವಿ. ಮರಿಗೌಡ್ರ ಮಾತನಾಡಿ, ರಂಗಭೂಮಿಯಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರಿಗೆ ರಂಗಸೇವಾ ಕಲಾ ಸಂಘದವರು ಗೌರವ ಸಲ್ಲಿಸುತ್ತಿರುವುದು ಅದ್ಭುತ ಕ್ಷಣವಾಗಿದೆ. ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ನೀಡುವುದರಿಂದ ಯುವ ಕಲಾವಿದರಿಗೆ ಸ್ಪೂರ್ತಿಯಾದಂತಾಗುತ್ತದೆ. ಹಿರಿಯ ಕಲಾವಿದರು ನಡೆದುಕೊಂಡು ಬಂದ ಹಾದಿಯಲ್ಲಿ ಇಂದಿನ ದಿನಮಾನದ ಯುವ ಕಲಾವಿದರು ನಡೆದುಕೊಂಡು ಹೋಗುವ ಅವಶ್ಯಕತೆ ಇದ್ದು, ಮತ್ತಷ್ಟು ಹೊಸ ಹೊಸ ಪ್ರತಿಭೆ ಉದಯವಾಗಲಿ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ವಿರುಪಾಕ್ಷಯ್ಯ ಬೇನಾಳ, ಗುರಯ್ಯಸ್ವಾಮಿ ಸಂಕನೂರ, ಮಂಜುನಾಥ ಸಂಕನಾಳ, ಬಸವರಾಜ ಯಾಳವಾರ, ಪ್ರಕಾಶ. ಆರ್.ಮೂಡಗೇರಿ, ಅಂಬಿಕಾ ಹಿರಿಯೂರ ಅವರಿಗೆ ಸನ್ಮಾನಿಸಲಾಯಿತು. ಹಿರಿಯ ರಂಗಭೂಮಿ ಕಲಾವಿದ ರಾಜಣ್ಣ ಜೇವರ್ಗಿ, ನಜೀರ್ ಮಜ್ಜಗಿ, ಅಂಬರೇಶ್ ನಾಗೂರ, ಪ್ರಭು ಹಿರೇಮಠ, ಖಾಸಿಮಸಾಬ್ ಹವಾಲ್ದರ್, ಸಣಗಮೇಶ ಬಿಳಗಿ ಸೇರಿದಂತೆ ಹಲವರು ಇದ್ದರು.