‘ಕೊಡವ ಲ್ಯಾಂಡ್‌’ ಉಳಿವಿಗಾಗಿ ಜಿಲ್ಯಾದ್ಯಂತ ಜನಜಾಗೃತಿ: ಎನ್‌.ಯು. ನಾಚಪ್ಪ

KannadaprabhaNewsNetwork |  
Published : Aug 31, 2024, 01:36 AM IST
ಚಿತ್ರ :  30ಎಂಡಿಕೆ1 : ಮೂರ್ನಾಡಿನಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಮೂರ್ನಾಡಿನಲ್ಲಿ ಜನಜಾಗೃತಿ ಮಾನವ ಸರಪಳಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಸಿರು ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯದ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಮೂರ್ನಾಡಿನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೂ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವ ಲ್ಯಾಂಡನ್ನು ಮಾಡುತ್ತಿದ್ದಾರೆ. ಅಲ್ಲದೆ ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾಕಟಾಕ್ಷವಿದೆ ಎಂದು ಆರೋಪಿಸಿದ ಅವರು, ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು.

ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಎನ್‌ಸಿ ವತಿಯಿಂದ ಸೆ.9ರಂದು ನಾಪೋಕ್ಲು, ಸೆ.10 ರಂದು ಚೇರಂಬಾಣೆ ಹಾಗೂ ಸೆ.16 ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.

ಮೂರ್ನಾಡು ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಬೊಳ್ಳಚೆಟ್ಟಿರ ಜಯಂತಿ, ಬಿದ್ದಂಡ ಉಷಾ, ಪೆಮ್ಮುಡಿಯಂಡ ವೇಣು, ನಂದೇಟಿರ ರವಿ, ಬಡುವಂಡ ವಿಜಯ, ಪುದಿಯೊಕ್ಕಡ ಕಾಶಿ, ಪುದಿಯೊಕ್ಕಡ ಬೋಪಣ್ಣ, ಪುದಿಯೊಕ್ಕಡ ಸೋಮಯ್ಯ, ಪ್ರೊ. ಚೌರೀರ ಜಗತ್, ನೆರವಂಡ ಅನೂಪ್, ಪೆಮ್ಮಂಡ ಪವಿತ್ರ, ಚೊಕ್ಕಂಡ ಕಟ್ಟಿ, ಅಚ್ಚಕಾಳೆರ ಸಂತು, ಚಂಗಣಮಕ್ಕಡ ವಿನು ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!