ಮಂಡ್ಯದ ಮಣ್ಣಿನಲ್ಲಿಯೇ ರಂಗಕಲೆ ಹುಟ್ಟಿ ಬಂದಿದೆ: ಆರ್.ಯೋಗಾನಂದ ಕೆರಗೋಡು

KannadaprabhaNewsNetwork |  
Published : May 24, 2026, 02:00 AM IST
23ಕೆಎಂಎನ್ ಡಿ30 | Kannada Prabha

ಸಾರಾಂಶ

ಮಂಡ್ಯ ಮಣ್ಣಿನಲ್ಲಿಯೇ ರಂಗಕಲೆ-ಕಲಾರಾಧನೆ ಬೆಳೆದು ಬಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪೌರಾಣಿಕ ನಾಟಕಗಳು ನಡೆದರೆ ಅವರೊಟ್ಟಿಗೆ ನಾವು ನಿಲ್ಲುತ್ತೇವೆ. ಜಿಲ್ಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕಲಾವಿದರು, ಸಾಧಕರಿದ್ದು, ಅವರನ್ನು ಗುರುತಿಸಿ ಜನರಿಗೆ ಪರಿಚಯಿಸುವ ಜೊತೆಗೆ ಗೌರವಿಸುವ ಕೆಲಸವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಕ್ಕರೆ ಜಿಲ್ಲೆಯ ಮಣ್ಣಿನಲ್ಲಿಯೇ ರಂಗಕಲೆ-ಕಲಾರಾಧನೆ ಹುಟ್ಟಿ ಬಂದಿದೆ ಎಂದು ಸಮಾಜ ಸೇವಕ ಆರ್.ಯೋಗಾನಂದ ಕೆರಗೋಡು ಹೇಳಿದರು.

ನಗರದ ಕಲಾಮಂದಿರದಲ್ಲಿ ಮಹಾರಾಜ ಕಲಾಬಳಗ ಕೆಎಚ್‌ಬಿ ಕೆರೆಯಂಗಳ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಬಿರುದು ಸಮರ್ಪಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಮಂಡ್ಯ ಮಣ್ಣಿನಲ್ಲಿಯೇ ರಂಗಕಲೆ-ಕಲಾರಾಧನೆ ಬೆಳೆದು ಬಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪೌರಾಣಿಕ ನಾಟಕಗಳು ನಡೆದರೆ ಅವರೊಟ್ಟಿಗೆ ನಾವು ನಿಲ್ಲುತ್ತೇವೆ ಎಂದರು.

ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕಲಾವಿದರು, ಸಾಧಕರಿದ್ದು, ಅವರನ್ನು ಗುರುತಿಸಿ ಜನರಿಗೆ ಪರಿಚಯಿಸುವ ಜೊತೆಗೆ ಗೌರವಿಸುವ ಕೆಲಸವಾಗಬೇಕು ಎಂದರು.

ಇದೇ ವೇಳೆ ಜಂಟಿ ಕೃಷಿ ನಿರ್ದೇಶಕ ಅಶೋಕ್‌ಗೆ ರೈತಮಿತ್ರ, ವೈದ್ಯ ಡಾ.ಎಚ್.ಸಿ.ಆನಂದ್‌ಗೆ ವೈದ್ಯರತ್ನ, ಪದ್ಮಶ್ರೀ ಪುರಸ್ಕೃತ ಅಂಕೇಗೌಡಗೆ ಪುಸ್ತಕ ರತ್ನ, ಶಿವಾರ ಉಮೇಶ್‌ಗೆ ಕಲಾರತ್ನ ಬಿರುದು ನೀಡಿ ಗೌರವಿಸಲಾಯಿತು.

ನಾಟಕ ನಿರ್ದೇಶಕ ಎಚ್.ಕೆ.ನಾಗರಾಜು ನಿರ್ದೇಶನದಲ್ಲಿ ಪೌರಾಣಿಕ ನಾಟಕ ಉತ್ತಮ ಪ್ರದರ್ಶನ ಕಂಡು ಸಭಿಕರ ಮನಸೊರೆಗೊಂಡಿತು. ಮಹಿಳಾ ಪಾತ್ರಧಾರಿಗಳಾಗಿ ಮಂಡ್ಯ ಮಮತಾರಾವ್, ಬೆಂಗಳೂರು ಮಾಲಾರಾವ್, ಭಾನುಪ್ರಿಯಾ ಅಭಿನಯಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಬಾಣಸವಾಡಿ ಹರೀಶ್, ಕೆ.ಆಶೋಕ್, ಕ್ರೀಡಾ ಅಧಿಕಾರಿ ಮನುಜಶ್ರೀ, ಇನ್ಸ್ಪೈರ್ ವಿನಯ್ ಕುಮಾರ್, ವಿಜಯಕುಮಾರ್, ಅಂಕರಾಜು, ವಸಂತಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ನಾಗೇಶ್, ವಸಂತ್ ರಾಜ್, ಬಿಳಗೂಲಿ ವಿವೇಕ್, ಅರುಣಕುಮಾರಿ, ಸೇರಿದಂತೆ ಹಲವರು ಹಾಜರಿದ್ದರು.ಇಂದು ಲೇಖಕಿ ಡಾ.ಕೆಂಪಮ್ಮರ ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ ಸಂಶೋಧನ ಗ್ರಂಥ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಸಂಘದಿಂದ ಮೇ 24ರಂದು ಸಂಜೆ 5 ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಲೇಖಕಿ, ಸಂಶೋಧಕಿ, ಕನ್ನಡ ಪ್ರಾಧ್ಯಾಪಕಿ ಡಾ.ಕೆಂಪಮ್ಮ ಅವರ ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ ಸಂಶೋಧನ ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ.

ಡಾ.ಕೆಂಪಮ್ಮ ಅವರು ಸಾಮಾಜಿಕ, ಸಾಂಸ್ಕೃತಿಕ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜತೆಗೆ ಪ್ರಮುಖ ಬರಹಗಾರರಾಗಿ ಕನ್ನಡ ಸಾಹಿತ್ಯ, ಜಾನಪದ, ಜೀವನ ಚರಿತ್ರೆ ಪ್ರಕಾರಗಳಲ್ಲಿ ಈಗಾಗಲೇ 9 ಸ್ವತಂತ್ರ ಕೃತಿಗಳನ್ನು ರಚಿಸಿದ್ದು, 12ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ.ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿರುವ ಡಾ.ಕೆಂಪಮ್ಮ ಅವರ ಪ್ರಸ್ತುತ ಗ್ರಂಥವು ಮಂಡ್ಯ ಜಿಲ್ಲೆಯ ಜನಪದ ಆಚರಣೆಗಳ ಕುರಿತು ಸಂಶೋಧನೆ ಮಾಡಿರುವ ಗ್ರಂಥವಾಗಿದೆ.

ಈ ಗ್ರಂಥದಲ್ಲಿ ಹುಟ್ಟಿನಿಂದ ಸಾವಿನವರೆಗಿನ ಜಿಲ್ಲೆಯ ಪ್ರಮುಖ ಜನಾಂಗ ಹಾಗೂ ಇತರೆ ಜನಾಂಗಗಳಲ್ಲಿನ ಆಚರಣೆಗಳ ವೈವಿಧ್ಯತೆಗಳ ಮೇಲೆ ಬೆಳಕು ಚೆಲ್ಲುವ ಜೀವನಾವರ್ತ ಆಚರಣೆಗಳು, ಕೃಷಿ ಸೇರಿದಂತೆ ಜಿಲ್ಲೆಯ ವಿವಿಧ ವೃತ್ತಿಗಳ ಸಂದರ್ಭದಲ್ಲಿ ಆಚರಿಸುವ ವೃತ್ತಿ ಆಚರಣೆಗಳು, ಹಬ್ಬ ಹರಿದಿನಕ್ಕೆ ಸಂಬಂಸಿದ ಹಬ್ಬ ಜಾತ್ರೆ, ಆಚರಣೆಗಳು, ಸಸ್ಯ ಪ್ರಾಣಿಗಳಿಗೆ ಸಂಬಂಧಿಸಿದ ಆಚರಣೆಗಳ ಸಮಗ್ರ ಮಾಹಿತಿಯ ವಿಶ್ಲೇಷಣೆಯ ಜತೆಗೆ ಆಚರಣಾತ್ಮಕ ಜಾನಪದದ ಭವಿಷ್ಯ ಕುರಿತಂತೆ ಆಚರಣಾತ್ಮಕ ಜಾನಪದದ ಪ್ರಸ್ತುತತೆ, ಮರು ಚಿಂತನೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಚರಣೆಗಳ ಸ್ಥಿತಿಗತಿ ಮೊದಲಾದ ಅಮೂಲ್ಯ ವಿಚಾರಗಳನ್ನು ಕುರಿತ ಮಂಡ್ಯ ಜಿಲ್ಲೆಯ ಜನಪದ ಆಚರಣೆಗಳನ್ನು ಕುರಿತ ಮಾಹಿತಿಗಳನ್ನು ವಿಶ್ಲೇಷಣಾತ್ಮಕವಾಗಿ ಒಳಗೊಂಡಿರುವ ಮಹತ್ವದ ಸಂಶೋಧನಾ ಗ್ರಂಥವಾಗಿದೆ.ಈ ಗ್ರಂಥವನ್ನು ವಿಶ್ರಾಂತ ಕುಲಪತಿಗಳು, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಹಿ.ಚಿ.ಬೋರಲಿಂಗಯ್ಯ ಅವರು ಬಿಡುಗಡೆಗೊಳಿಸಿ ಕೃತಿ ಕುರಿತು ಮಾತನಾಡಲಿದ್ದಾರೆ. ಪ್ರಸಿದ್ಧ ವಿದ್ವಾಂಸ ಡಾ.ರಾಗೌ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು, ಪುಸ್ತಕ ಪ್ರಕಾಶಕರಾದ ಶಶಿ ಪಬ್ಲಿಕೇಶನ್‌ನ ರಾಮನಗರದ ಎಸ್.ನಾಗಭೂಷಣ ಅವರು ಭಾಗವಹಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಡಾ. ಬಿ.ಜಯಪ್ರಕಾಶಗೌಡ, ಲೇಖಕಿ ಡಾ.ಕೆಂಪಮ್ಮ ಇರಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ
ದಾಖಲೆಗಳು ಸರಿಯಾಗಿದ್ದರೆ ನಿವೇಶನಗಳು ಖಚಿತ: ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ