ಇಂದಿನಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರಂಗ ಕಾರ್ಯಾಗಾರ, ನಾಟಕ ಉತ್ಸವ

KannadaprabhaNewsNetwork |  
Published : Nov 16, 2024, 12:32 AM IST
15ನಾಟಕ | Kannada Prabha

ಸಾರಾಂಶ

ಕಾಲೇಜು ವಿದ್ಯಾರ್ಥಿಗಳಿಗಾಗಿ ‘ರಂಗಭಾಷೆ - ನಾಕಟವೆಂದರೆ ಏನು, ಯಾಕೆ ಮತ್ತು ಹೇಗೆ?’ ಎಂಬ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವವನ್ನು ನ.16ರಿಂದ 18ರ ವರೆಗೆ ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಂಗಭೂಮಿ ಉಡುಪಿ ಸಂಸ್ಥೆ ಆಶ್ರಯದಲ್ಲಿ ಕಾರ್ಕಳದ ಯಕ್ಷ ರಂಗಾಯಣ ಹಾಗೂ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜುಗಳ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ರಂಗಭಾಷೆ - ನಾಕಟವೆಂದರೆ ಏನು, ಯಾಕೆ ಮತ್ತು ಹೇಗೆ?’ ಎಂಬ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವವನ್ನು ನ.16ರಿಂದ 18ರ ವರೆಗೆ ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಭೂಮಿ ಸಂಸ್ಥೆ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಗ್ಗೆ 11ಗಂಟೆಗೆ ರಂಗನಿರ್ದೇಶಕ ಪ್ರಸನ್ನ, ಶಿಬಿರವನ್ನು ಉದ್ಘಾಟಿಸಿ ಆಶಯ ಭಾಷಣ ಮಾಡಲಿದ್ದಾರೆ. ರಂಗಭೂಮಿ ಉಡುಪಿ ಗೌರವಾಧ್ಯಕ್ಷ, ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ನಟ ಹಾಗೂ ನಿರ್ದೇಶಕ ಮಂಡ್ಯ ರಮೇಶ್, ಕಲ್ಯಾಣಪುರ ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕ ಫರ್ಡಿನಾಂಡ್ ಗೋನ್ಸಾಲ್ವಿಸ್, ರಂಗ ಸಮಾಜದ ಸದಸ್ಯ ಶಶಿಧರ ಭಾರಿಘಾಟ್, ರಂಗ ನಿರ್ದೇಶಕಿ ಶ್ವೇತಾರಾಣಿ ಎಚ್.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ, ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ವೆಂಕಟರಮಣ ಐತಾಳ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ನಾಗಾಭರಣ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಕೆ.ಜಿ. ಕೃಷ್ಣಮೂರ್ತಿ, ಶ್ರೀಪಾದ ಭಟ್, ಮಂಜು ಕೊಡಗು, ವಿನೀತ್ ಕುಮಾರ್, ಶ್ವೇತಾ ಎಚ್.ಕೆ. ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ಕಾರ್ಯಾಗಾರದಲ್ಲಿ ಅಭಿನಯ ದರ್ಪಣ ಚಿಕ್ಕಮಗಳೂರು ತಂಡದಿಂದ ‘ಮುಸ್ಸಂಜೆಯಲ್ಲಿ ನಡೆದ ಘಟನೆ’, ಕಿನ್ನರ ಮೇಳ ತುಮರಿ ತಂಡದಿಂದ ‘ಇರುವೆ ಪುರಾಣ’, ಭಳಿರೇ ವಿಚಿತ್ರಂ ತಂಡದಿಂದ ‘ದಶಾನನ ಸ್ವಪ್ನ ಸಿದ್ದಿ’ ಹಾಗೂ ಒಡನಾಡ ತಂಡದಿಂದ ‘ಆನೆ ಡಾಕ್ಟರ್’ ನಾಟಕಗಳು ಪ್ರದರ್ಶನಗೊಳ್ಳಲಿವೆ. ನ.18ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭಾಸ್ಕರ್ ರಾವ್ ಕಿದಿಯೂರು, ತಲ್ಲೂರು ಶಿವರಾಂ ಶೆಟ್ಟಿ ಪ್ರದೀಪ್ ಚಂದ್ರ ಕುತ್ಪಾಡಿ, ರವೀಂದ್ರ ನಾಯಕ್, ರೇವತಿ ನಾಡಿಗೇರ್ ಉಪಸ್ಥಿತರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ