ರಂಗಭೂಮಿ ಕಲಾವಿದರು ಪ್ರಶಸ್ತಿಗಳ ಹಿಂದೆ ಬೀಳಬಾರದು: ಕಪ್ಪಣ್ಣ

KannadaprabhaNewsNetwork | Published : Mar 18, 2025 12:38 AM

ಸಾರಾಂಶ

ಜನರು ನೀಡುವ ಮರ್ಯಾದೆಗಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ. ಹಾಗಾಗಿ ರಂಗಭೂಮಿ ಕಲಾವಿದರು ಪ್ರಶಸ್ತಿಗಾಗಿ ಯಾರಿಗೂ ಕಾಡಬೇಡಿ, ಬೇಡ ಬೇಡಿ. ಪ್ರಶಸ್ತಿ ಬರುವುದಿದ್ದರೆ ಯಾವತ್ತಿದ್ದರೂ ನಿಮಗೆ ಬಂದೇ ಬರುತ್ತದೆ ಎಂದು ಬಿ.ವಿ.ಕಾರಂತ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ. ಕಪ್ಪಣ್ಣ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಕಾರ್ಯಕ್ರಮ । ರಾಜ್ಯ ಪ್ರಶಸ್ತಿ ಪಡೆದು ಸಿಎಂ ಕಾಲಿಗೆ ಬೀಳದೋ ಧಿಕ್ಕರಿಸುತ್ತೇನೆ ಎಂದ ಎಸ್‌ಜಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜನರು ನೀಡುವ ಮರ್ಯಾದೆಗಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ. ಹಾಗಾಗಿ ರಂಗಭೂಮಿ ಕಲಾವಿದರು ಪ್ರಶಸ್ತಿಗಾಗಿ ಯಾರಿಗೂ ಕಾಡಬೇಡಿ, ಬೇಡ ಬೇಡಿ. ಪ್ರಶಸ್ತಿ ಬರುವುದಿದ್ದರೆ ಯಾವತ್ತಿದ್ದರೂ ನಿಮಗೆ ಬಂದೇ ಬರುತ್ತದೆ ಎಂದು ಬಿ.ವಿ.ಕಾರಂತ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ. ಕಪ್ಪಣ್ಣ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಸೋಮವಾರ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಹಮ್ಮಿಕೊಂಡಿದ್ದ ಕನ್ನಡ, ತೆಲುಗು, ತಮಿಳು ನಾಟಕಗಳ ಹಬ್ಬ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಸಮಾರೋಪದಲ್ಲಿ ಅವರು ಮಾತನಾಡಿದರು. ನಿಮ್ಮಂತಹ ಕಲಾವಿದರಾಗುವುದು ಕಷ್ಟದ ವಿಷಯ. ಹಾಗಾಗಿ, ನೀವು ಪ್ರಶಸ್ತಿ ಅಂತಾ ಯಾರಿಗೂ, ಎಂದಿಗೂ ದಂಬಾಲು ಬೀಳಬೇಡಿ ಎಂದರು.

ರಾಜ್ಯ ಪ್ರಶಸ್ತಿಯನ್ನು ಪಡೆದ ಮಹಿಳೆಯೊಬ್ಬರು ವೇದಿಕೆಯಲ್ಲೇ ಮುಖ್ಯಮಂತ್ರಿ ಕಾಲಿಗೆ ದಬಾರ್ ಅಂತಾ ಬಿದ್ದಿದ್ದರು. ಅಂತಹ ಬಾಳಿಗೆ ಧಿಕ್ಕಾರ ಹೇಳಲಿಚ್ಛಿಸುತ್ತೇನೆ. ನೀನೊಬ್ಬ ರಾಜ್ಯದ ಪ್ರಮುಖ ಕಲಾವಿದೆ, ಸಾಹಿತಿ ಎಂಬ ಸಾಧನೆಗೆ ಪ್ರಶಸ್ತಿ ಕೊಟ್ಟಿದ್ದರೆ, ಮುಖ್ಯಮಂತ್ರಿ ಕಾಲಿಗೆ ಬೀಳುವ ಹೀನಾಯ ಸ್ಥಿತಿ ಬರಬಾರದಿತ್ತು. ಇಂತಹವರಿಗೆ ನಾವೇನೂ ಮಾಡಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಹಿಂದೆ ನಾಟಕ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಅನೇಕ ಸಚಿವರು ಪ್ರಶಸ್ತಿಗಾಗಿ ಶಿಫಾರಸು ಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದರೆ, ಅಂತಹವರಿಗೆ ಶಿಫಾರಸು ಮಾಡಬೇಕು. ಆದರೆ, ಹೆಚ್ಚಿನ ಮಂತ್ರಿಗಳು ಶಿಫಾರಸು ಮಾಡಿದ್ದು ಸಿನಿಮಾ ತಾರೆಯರು, ಇತರೆ ತಾರೆಯರಿಗೆ. ನಾವ್ಯಾರೂ ಸಿನಿಮಾ ತಾರೆಯರ ವಿರುದ್ಧವಲ್ಲ. ಮಂತ್ರಿಗಳ ವರ್ತನೆ ವಿರುದ್ಧ ಬೇಸರದಿಂದ ಈ ಮಾತುಗಳನ್ನು ಆಡುತ್ತಿದ್ದೇನೆ ಎಂದರು.

ಸಾಹಿತಿಗಳ ಸಮಸ್ಯೆ ಬಗ್ಗೆ ಮುಕ್ತವಾಗಿ ಹೇಳುವಂತಹ ಮಂತ್ರಿಗಳು, ಮುಖ್ಯಮಂತ್ರಿಗಳು ಹಿಂದೆಲ್ಲಾ ಇದ್ದರು. ಈಗ ಅಂತಹ ಯಾವುದೇ ಮಂತ್ರಿ, ಮುಖ್ಯಮಂತ್ರಿಯೂ ಇಲ್ಲ. ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ್ ಬಳಿ ಗಂಟೆಗಟ್ಟಲೇ ಮಾತನಾಡುತ್ತಿದ್ದೆವು. ದೇವೇಗೌಡರ ಕರೆ ಬಂದರೂ ಹೊರಟೆ ಅಂತಾ ಹೇಳಿ, ಗಂಟೆಗಟ್ಟಲೇ ನಮ್ಮೊಂದಿಗೆ ಎಂ.ಪಿ.ಪ್ರಕಾಶ್ ಮಾತನಾಡುತ್ತಿದ್ದರು. ಈಗ ಕಲಾವಿದರೊಂದಿಗೆ, ಸಾಹಿತಿಗಳೊಂದಿಗೆ ಹೀಗೆ ಮಾತನಾಡುವವರು ಯಾರಿದ್ದಾರೆ ಎಂದು ಅವರು ಪ್ರಶ್ನಿಸಿದರು.

ನಾನು ವೈಯಕ್ತಿಕವಾಗಿ ಸಣ್ಣ ಕೆಲಸಗಳನ್ನು ಗಿರೀಶ ಕಾಸರವಳ್ಳಿ ಸಿನಿಮಾಗಳ ವೇಳೆ ಮಾಡಿದ್ದೆ. ಕಾಸರವಳ್ಳಿಯ ಬಹುತೇಕ ಸಿನಿಮಾಗಳಿಗೆ ರಂಗಭೂಮಿಯ ವೃತ್ತಿ ಕಲಾವಿದೆಯರನ್ನೇ ಆಯ್ಕೆ ಮಾಡಿದ್ದೆ. ಕೋಮುವಾದ ಅದು ಇದು ಅಂತೆಲ್ಲಾ 128 ಥಿಯೆರಿ ಮಾಡುತ್ತೇವೆ. ವೃತ್ತಿ ರಂಗಭೂಮಿ ಹಿರಿಯ ಕಲಾವಿದೆ ಹುಬ್ಬಳ್ಳಿಯ ಪುಷ್ಪಮಾಲಾ ಅಬ್ದುಲ್ ಸಾಬ್ ಅಣ್ಣಿಗೇರಿ ಮುಸ್ಲಿಮ್‌ ವ್ಯಕ್ತಿಗೆ ಮದುವೆಯಾಗಿ, ಅದ್ಭುತ ಸಂಸಾರ ಮಾಡಿ, ಸಂಘರ್ಷವಿಲ್ಲದೇ ಇಬ್ಬರೂ ಸಂತ ಶಿಶುನಾಳ ಷರೀಫ ನಾಟಕ ಮಾಡಿದ್ದನ್ನು ನೋಡಿದ್ದೇನೆ. ಅಷ್ಟೇ ಅಲ್ಲ, ಇಂತಹ ದೊಡ್ಡ ಕಲಾವಿದರನ್ನು ಪ್ರದರ್ಶನಕ್ಕೆ ಹೋದಲ್ಲೆಲ್ಲಾ ಕರೆದೊಯ್ಯುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನ ಪ್ರತಿಷ್ಠಿತ ಸೆಂಚ್ಯುರಿಯನ್ ಕ್ಲಬ್‌ನಲ್ಲಿ ಇಂತಹ ಕಲಾವಿದರು ಅಸ್ಪೃಶ್ಯ(ಅನ್‌ಟಚಬಲ್‌)ರು ಇಂತಹ ಕಲಾವಿದರು. ಇಂತಹವರನ್ನು ಸೆಂಚ್ಯುರಿಯನ್ ಕ್ಲಬ್ ಒಳಗೆ ಹೋಗುವುದಕ್ಕೂ ಬಿಡುವುದಿಲ್ಲ. ಆದರೆ, ಇಂತಹ ಕಲಾವಿದರನ್ನು ಕ್ಲಬ್‌ ಒಳಗೆ ಕರೆದೊಯ್ದು ಇಂತಹ ಕಲಾವಿದರ ಪ್ರದರ್ಶನ ಕಂಡು ವಾಟ್ ಎ ಬ್ಯೂಟಿ ಫುಲ್ ಶೋ ಅಂತಾ ಇಂಗ್ಲಿಷ್‌ನಲ್ಲಿ ಶ್ಲಾಘಿಸುವ, ವಾಟ್ ಎ ಬ್ಯೂಟಿ ಫುಲ್ ಆಕ್ಟಿಂಗ್ ಯಾರ್... ಅಂತಾ ಹೇಳುವ ಕೆಲಸ ಮಾಡುತ್ತೇನೆ ಎಂದು ರಂಗಭೂಮಿ ಕಲಾವಿದರ ಬಗ್ಗೆ ಶ್ರೀನಿವಾಸ ಕಪ್ಪಣ್ಣ ಹೇಳಿದರು.

ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ರಂಗ ಸಮಾಜದ ಸದಸ್ಯರಾದ ಪ್ರೊ.ಲಕ್ಷ್ಮೀ ಚಂದ್ರಶೇಖರ, ಶಶಿಧರ ಬಾರೀಘಾಟ್‌, ಡಾ. ಕೆ.ರಾಮಕೃಷ್ಣಯ್ಯ, ಡಿಂಗ್ರಿ ನರೇಶ, ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರವಿಚಂದ್ರ, ಡಾ.ಶೃತಿರಾಜ್ ಇತರರು ಇದ್ದರು.

ಇದೇ ವೇಳೆ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾದ ಧಾರವಾಡದ ಎಂ.ಎಸ್‌. ಕೊಟ್ರೇಶ, ಹುಬ್ಬಳ್ಳಿಯ ಪುಷ್ಪಮಾಲಾ ಅದ್ಬುಲ್ ಸಾಬ್‌ ಅಣ್ಣಿಗೇರಿ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಕುಪ್ಪೆಲೂರು ವೀರಯ್ಯ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು.

- - -

(ಬಾಕ್ಸ್‌) * ಜೀವಸತ್ವ ಇರುವ ಕಲೆ ರಂಗಭೂಮಿ: ಐಜಿಪಿಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಹಿಂದಿನಿಂದ ಈವರೆಗೂ ರಂಗಭೂಮಿ ಜೀವಸತ್ವ ಇರುವ ಕಲೆ. ಚಿತ್ರಕಲೆ ಮಾತನಾಡದೇ, ಅದನ್ನು ಅನುಭವಿಸಬಹುದು, ಸಂಗೀತವನ್ನು ಕಣ್ಣು ಮುಚ್ಚಿ ಕೇಳಬಹುದು. ಆದರೆ, ಪಂಚೇಂದ್ರಿಯಗಳನ್ನು ಅರಳಿಸಿ, ಅನುಭವಿಸುವ ಕಲೆ ರಂಗಭೂಮಿ ಮಾತ್ರ. ರಂಗಭೂಮಿ ಬದುಕನ್ನು ಮಾಡಿಕೊಳ್ಳಲು ಅಗಾಧ ಧೈರ್ಯ, ಆತ್ಮವಿಶ್ವಾಸ ಬೇಕು. ಇಂತಹ ಪ್ಯಾಷನ್ ಯುವ ಸಮೂಹ ಕಾಪಾಡಿಕೊಳ್ಳುವ ಅಗತ್ಯ ಇದೆ. ವೃತ್ತಿ ರಂಗಭೂಮಿ ಸೇರಿದಂತೆ ಎಲ್ಲ ಕಲೆ ಇತರೆ ಪ್ರಾಕಾರಗಳು ಸರ್ಕಾರದ ಮೇಲಿನ ಅವಲಂಬನೆಗಿಂತ ಜನಸಮೂಹದ ಬೆಂಬಲ ಮುಖ್ಯ. ಸಾಂಸ್ಕೃತಿಕ ಮೌಲ್ಯ, ಅಸ್ಮಿತೆ ಉಳಿಸಿಕೊಂಡ ಜನಸಮೂಹ ಮಾದರಿಯಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.

- - -

(ಪೋಟೋ ಬರಲಿವೆ)

Share this article