ಹುಬ್ಬಳ್ಳಿ: ರಂಗ ಪಂಚಮಿ ಬಣ್ಣದಾಟಕ್ಕೆ ಹುಬ್ಬಳ್ಳಿ ಸಿದ್ಧಗೊಂಡಿದ್ದು, ಮಂಗಳವಾರ ಇಡೀ ಹುಬ್ಬಳ್ಳಿ ಬಣ್ಣದಾಟದಲ್ಲಿ ಮಿಂದೇಳಲಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಇಡೀ ನಗರದಲ್ಲಿ ಖಾಕಿ ಸರ್ಪಗಾವಲು ಇದೆ.
ಅದರಂತೆ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಹೋಳಿ ಹಬ್ಬದಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಹಲವಾರು ಜನರು ಟಿಕೆಟ್ ಬುಕ್ಕಿಂಗ್ ಮಾಡಿ ಬಣ್ಣದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಕೇಶ್ವಾಪುರ, ವಿದ್ಯಾನಗರ, ಗೋಪನಕೊಪ್ಪ ಸೇರಿದಂತೆ ಹಲವಡೆಗಳ ಅಪಾರ್ಟ್‌ಮೆಂಟ್ ಹಾಗೂ ಓಣಿಗಳಲ್ಲಿ ರೇನ್‌ಡ್ಯಾನ್ಸ್, ಡಿಜೆ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿವೆ.
ಇನ್ನೊಂದೆಡೆ ಬಣ್ಣ, ಪಿಚಕಾರಿ ಸೇರಿದಂತೆ ಹೋಳಿ ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಇಲ್ಲಿಯ ದುರ್ಗದಬೈಲ್, ಗಾಂಧಿ ಮಾರ್ಕೆಟ್, ದಾಜಿಬಾನ್‌ಪೇಟೆ ಮಾರ್ಕೆಟ್‌ನಲ್ಲಿ ಬಣ್ಣ- ಪಿಚಕಾರಿ, ಹಲಗೆ ಖರೀದಿಯೂ ಜೋರಾಗಿತ್ತು.ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಹುಬ್ಬಳ್ಳಿಯಲ್ಲಿ 400ಕ್ಕೂ ಅಧಿಕ ರತಿ- ಮನ್ಮಥರ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿವೆ. ಐದು ದಿನಗಳ ಕಾಲ ಪೂಜಿಸಲ್ಪಟ್ಟ ಮೂರ್ತಿಗಳು ಹಾಗೂ ನಗರದ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣರ ಮೂರ್ತಿಗಳ ದಹನ ಪ್ರಕ್ರಿಯೆ ನಡೆಯಲಿದೆ. ನಂತರದಲ್ಲಿ ಮನೆ ಮನೆಗಳಲ್ಲಿ ಆಯಾ ಕುಟುಂಬಗಳ ಸಂಪ್ರದಾಯದಂತೆ ಸಿಹಿ ಮತ್ತು ಮಾಂಸಾಹಾರಿ ಖಾದ್ಯಗಳ ಭೋಜನಕ್ಕೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ.
ಬಿಗಿಭದ್ರತೆಇನ್ನು ಹೋಳಿ ಹಬ್ಬದಾಚರಣೆ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷ್ನರೇಟ್‌ನಿಂದ ಸಾಕಷ್ಟುಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಕೂಡ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಸೋಮವಾರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ನೇತೃತ್ವದಲ್ಲಿ ಪಥ ಸಂಚಲನ ನಡೆಸಿ ಶಾಂತಿಯುತ ಹೋಳಿ ಆಚರಣೆಗೆ ಮನವರಿಕೆ ಮಾಡಲಾಗಿದೆ. ರಂಗ ಪಂಚಮಿ ಆಚರಣೆಗೆ ಕೆಎಸ್‌ಆರ್‌ಪಿ, ಸಿಎಆರ್ ಸೇರಿದಂತೆ ಒಟ್ಟು 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇನ್ನೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.