ಕ್ರಿಸ್ಮಸ್, ಹೊಸ ವರ್ಷ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಿಶ್ವವಿಖ್ಯಾತ ಹಂಪಿಗೆ ಶನಿವಾರ 1.2 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಕಳೆದ ನಾಲ್ಕು ದಿನದಲ್ಲಿ ನಾಲ್ಕು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಬೆಂಗಳೂರು : ಕ್ರಿಸ್ಮಸ್, ಹೊಸ ವರ್ಷ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಕಳೆದ ನಾಲ್ಕು ದಿನದಲ್ಲಿ ನಾಲ್ಕು ಲಕ್ಷ ಪ್ರವಾಸಿಗರು ಭೇಟಿ
ವಿಶ್ವವಿಖ್ಯಾತ ಹಂಪಿಗೆ ಶನಿವಾರ 1.2 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಕಳೆದ ನಾಲ್ಕು ದಿನದಲ್ಲಿ ನಾಲ್ಕು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಮುರುಡೇಶ್ವರ, ಹೊನ್ನಾವರಗಳಿಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಗೋಕರ್ಣಕ್ಕೆ ಶನಿವಾರ 50 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ಶಿವರಾತ್ರಿ ಸಂದರ್ಭದಲ್ಲಿ ಬರುವುದಕ್ಕಿಂತಲೂ ಹೆಚ್ಚು ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಎಲ್ಲೆಡೆ 2-3 ಕಿ.ಮೀ. ಟ್ರಾಫಿಕ್ ಜಾಮ್ ಆಗಿತ್ತು.
ಮಡಿಕೇರಿ, ಮೈಸೂರು, ಊಟಿ, ಕೇರಳಕ್ಕೆ ಹೋಗುತ್ತಿರುವ ಪ್ರವಾಸಿಗರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟೋಲ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ಹೈವೆ ಟ್ರಾಫಿಕ್ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆಯಲ್ಲೂ ವಾಹನಗಳ ಓಡಾಟ ಸಾಕಷ್ಟಿದೆ.
ಕಾಫಿನಾಡು ಚಿಕ್ಕಮಗಳೂರಿನ ಗಿರಿಶ್ರೇಣಿಗೆ ಪ್ರವಾಸಿಗರ ದಾಂಗುಡಿ
ಕಾಫಿನಾಡು ಚಿಕ್ಕಮಗಳೂರಿನ ಗಿರಿಶ್ರೇಣಿಗೆ ಪ್ರವಾಸಿಗರ ದಾಂಗುಡಿ ಇಡುತ್ತಿದ್ದು, ಮುಳ್ಳಯ್ಯನಗಿರಿ, ದತ್ತಪೀಠದ ಭಾಗಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಗಿರಿ ಭಾಗಕ್ಕೆ ಶನಿವಾರ 2500ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರವಾಸಿಗರು ಭೇಟಿ ನೀಡಿರುವ ಮಾಹಿತಿಯಿದೆ. ಕಾಫಿನಾಡಲ್ಲಿ 1,200ಕ್ಕೂ ಹೆಚ್ಚು ಹೋಂ ಸ್ಟೇ, ರೆಸಾರ್ಟ್ ಗಳಿದ್ದು, ಎಲ್ಲವೂ ಫುಲ್ ಆಗಿವೆ. ಆನ್ ಲೈನ್ ಬುಕ್ಕಿಂಗ್ ಇದ್ದವರಿಗೆ ಮಾತ್ರ ಅವಕಾಶ ಸಿಗುತ್ತಿದ್ದು, ಆನ್ ಲೈನ್ ಬುಕ್ಕಿಂಗ್ ಇಲ್ಲದೆ 500ಕ್ಕೂ ಹೆಚ್ಚು ವಾಹನಗಳು ವಾಪಸ್ ತೆರಳಿವೆ.
ಈ ಮಧ್ಯೆ, ಚಾರ್ಮಾಡಿ ಘಾಟ್ ಜಲಪಾತಗಳ ಬಂಡೆಗಳ ಮೇಲೆ ಪೊಲೀಸರ ಕಣ್ತಪ್ಪಿಸಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಎತ್ತರದ ಬಂಡೆಗಳ ಮಧ್ಯೆ ಹೋಗಿ ಪ್ರವಾಸಿಗರು ಪೋಟೋಶೂಟ್ ಮಾಡುತ್ತಿದ್ದಾರೆ. ಶೃಂಗೇರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಬೆಳಗ್ಗೆಯಿಂದ ರಾತ್ರಿವರೆಗೆ ಮಠದಲ್ಲಿ ಭಕ್ತರ ನೂಕುನುಗ್ಗಲು ಕಂಡು ಬರುತ್ತಿದೆ.
ಕರಾವಳಿ ಭಾಗದ ಸಮುದ್ರ ತೀರ, ಶರಾವತಿ ನದಿಯ ಬೋಟಿಂಗ್, ಕಾಂಡ್ಲಾವನ, ಸಿರಿಮನೆ, ಜೋಗ, ಅಬ್ಬೆ ಜಲಪಾತಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಜನ ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ.
