ರಾಜ್ಯದ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಮೊದಲಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್, ಆ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಮೊದಲಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್, ಆ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಿತು.ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನ.20ರಂದು ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಬೆಂಗಳೂರು ಹೋಟೆಲುಗಳ ಸಂಘ ಮತ್ತು ದಿ ಮ್ಯಾನೇಜ್‌ಮೆಂಟ್ ಆಫ್ ಅವಿರತ ಎಎಫ್‌ಎಲ್ ಕನೆಕ್ಟಿವಿಟಿ ಸಿಸ್ಟಮ್ಸ್ ಲಿಮಿಟೆಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮಂಗಳವಾರ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠವು ಅರ್ಜಿದಾರರ ಪರ ವಕೀಲರ ಮನವಿಯಂತೆ ರಾಜ್ಯ ಸರ್ಕಾರದ ಅಧಿಸೂಚನೆ ತಡೆಯಾಜ್ಞೆ ನೀಡಿತು. ಜೊತೆಗೆ, ಈ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಸರ್ಕಾರ ಹೊಂದಿದೆ ಎಂದು ತಿಳಿಸಿದರು.ಇದಾದ ಕೆಲವೇ ಗಂಟೆಯಲ್ಲಿ ಮಧ್ಯಂತರ ತಡೆಯಾಜ್ಞೆ ಆದೇಶಕ್ಕೆ ರಾಜ್ಯ ಸರ್ಕಾರದ ತೀವ್ರ ಆಕ್ಷೇಪವನ್ನು ಪರಿಗಣಿಸಿದ ಪೀಠ, ತನ್ನ ಮಧ್ಯಂತರ ಆದೇಶ ಹಿಂಪಡೆಯಿತು. ಅಲ್ಲದೆ, ಮಧ್ಯಂತರ ಆದೇಶದ ಕುರಿತು ಬುಧವಾರ ಸರ್ಕಾರದ ಮತ್ತು ಅರ್ಜಿದಾರರ ವಿಸ್ತೃತವಾಗಿ ವಾದ-ಪ್ರತಿವಾದ ಆಲಿಸಿದ ಬಳಿಕ ಆದೇಶ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಬೆಳಗ್ಗೆ ಅರ್ಜಿ ವಿಚಾರಣೆಗೆ ಬಂದಾಗ ಬೆಂಗಳೂರು ಹೋಟೆಲುಗಳ ಸಂಘ ಪರ ವಕೀಲ ಬಿ.ಕೆ.ಪ್ರಶಾಂತ್. ಕಾರ್ಮಿಕ ಇಲಾಖೆಯು 18-52 ವಯೋಮಾನದ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಒಂದು ದಿನದ ಋತುಚಕ್ರದ ರಜೆ ಕಡ್ಡಾಯಗೊಳಿಸಿದೆ. ಫ್ಯಾಕ್ಟರಿ ಕಾಯ್ದೆ, ಬೀಡಿ ಮತ್ತು ಸಿಗರೆಟು, ಪ್ಲಾಂಟೇಶನ್ ಕಾರ್ಮಿಕರು, ಅಂಗಡಿ ಮತ್ತು ವಾಣಿಜ್ಯ, ಮೋಟಾರ್ ಟ್ರಾನ್ಸ್‌ಪೋರ್ಟ್ ಸ್ಥಾಪನಾ ಕಾಯ್ದೆ ಅಡಿ ಬರುವ ಸಂಸ್ಥೆಗಳಿಗೆ ಅನ್ವಯಿಸುವಂತೆ ರಾಜ್ಯ ಸರ್ಕಾರ ಕಾರ್ಯಕಾರಿ ಆದೇಶ ಮಾಡಿದೆ. ಮೇಲಿನ ಎಲ್ಲಾ ಕಾಯ್ದೆಗಳು ಸಮಗ್ರ ರಜೆ ನೀತಿಯನ್ನು ಹೊಂದಿವೆ. ಋತುಚಕ್ರದ ರಜೆ ನೀಡಲು ಕಾಯ್ದೆಯ ಯಾವುದೇ ನಿಬಂಧನೆಯಲ್ಲೂ ಅವಕಾಶವಿಲ್ಲ. ಯಾವ ಅಧಿಕಾರದ ಅಡಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ ಎಂಬುದೂ ಅಧಿಸೂಚನೆಯಲ್ಲಿ ಉಲ್ಲೇಖವಾಗಿಲ್ಲ. ಹಾಗಾಗಿ, ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.ಈ ವಾದ ಪರಿಗಣಿಸಿದ ನ್ಯಾಯಪೀಠ, ಸರ್ಕಾರದ ಅಧಿಸೂಚನೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು.
ಅದಾದ ಕೆಲವೇ ಗಂಟೆಗಳಲ್ಲಿ ಭೋಜನ ವಿರಾಮಕ್ಕೂ ಮುನ್ನ ಪೀಠದ ಮುಂದೆ ಹಾಜರಾದ ಅಡ್ವೋಕೆಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ಋತುಚಕ್ರದ ರಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀತಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಆದೇಶ ಮಾಡಿದೆ. ಅದೇ ರೀತಿ ಕಾನೂನು ಆಯೋಗವು ಈ ಸಂಬಂಧ ಶಿಫಾರಸ್ಸು ಮಾಡಿದೆ. ಇದರ ಭಾಗವಾಗಿ ಸಂವಿಧಾನದ 142ನೇ ಪರಿಚ್ಛೇದದಡಿ ದೊರೆತಿರುವ ಅಧಿಕಾರ ಬಳಸಿ ಅಧಿಸೂಚನೆಯನ್ನು ಕಾನೂನು ಬದ್ಧವಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ವಾದ ಆಲಿಸದೇ ಅಧಿಸೂಚನೆಗೆ ತಡೆ ನೀಡಬಾರದು. ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿದರು.ಈ ಮನವಿ ಪರಿಗಣಿಸಿದ ಪೀಠ, ಬೆಳಗ್ಗೆ ಸರ್ಕಾರದ ಅಧಿಸೂಚನೆ ನೀಡಿದ್ದ ತಡೆಯನ್ನು ಹಿಂಪಡೆಯಿತು. ಜೊತೆಗೆ, ಬುಧವಾರ ಉಭಯ ಪಕ್ಷಕಾರರ ವಾದ ಆಲಿಸಿ ಮಧ್ಯಂತರ ತಡೆ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿತು. ವಿಚಾರಣೆಯಲ್ಲಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಸೇರಿದಂತೆ ಹಲವು ಮಹಿಳಾ ವಕೀಲರು ಈ ವೇಳೆ ಪೀಠದ ಮುಂದೆ ಹಾಜರಾಗಿದ್ದರು.ಕಾರ್ಮಿಕರು ಅಥವಾ ನೌಕರರ ಆರೋಗ್ಯ, ಯೋಗಕ್ಷೇಮ, ಸುರಕ್ಷತೆ ಕೆಲಸದ ಅವಧಿ, ವಾರದ ರಜೆ, ಒಟ್ಟು ರಜೆ ದಿನಗಳು, ವೇತನ ಸಹಿತ ರಜೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾಯ್ದೆ-ಕಾನೂನುಗಳಿವೆ. ಅದರಂತೆ ಉದ್ದಿಮೆ, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಫ್ಯಾಕ್ಟರಿ ಕಾಯ್ದೆ ಪ್ರಕಾರ ವರ್ಷಕ್ಕೆ 18 ರಜೆ ನೀಡಲಾಗುತ್ತಿದೆ. ಅಂಗಡಿ ಮತ್ತು ಕರ್ಮಿಷಯಲ್ ಸಂಸ್ಥೆಗಳು 18 ದಿನಗಳ ಗಳಿಕೆ ರಜೆಯ ಜೊತೆಗೆ 12 ದಿನ ಅನಾರೋಗ್ಯ ರಜೆ ನೀಡುತ್ತಿವೆ. 12 ಕ್ಯಾಷುವಲ್ ರಜೆಯೂ ಇದೆ. ಆದರೆ, ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾಯ್ದೆಯಲ್ಲಿ ಋತುಚಕ್ರದ ರಜೆ ಕಡ್ಡಾಯಗೊಳಿಸಿಲ್ಲ. ಈಗ ಏಕಾಏಕಿ ಋತುಚಕ್ರ ರಜೆ ಸೌಲಭ್ಯ ಒದಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಉದ್ದಿಮೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಆಗಲಿದೆ ಹಾಗೂ ಆರ್ಥಿಕ ಹೊರೆ ಸಹ ಬೀಳಲಿದೆ ಎಂದು ಅರ್ಜಿದಾರ ಸಂಘ ಆಕ್ಷೇಪಿಸಿದೆ.