ವಿದ್ಯಾರ್ಥಿನಿಯರಿಗೂ ಋತುಚಕ್ರ ರಜೆಯ ಕೂಗು

| Published : Oct 22 2025, 01:03 AM IST

ಸಾರಾಂಶ

ಮುಟ್ಟಿನ ಆರೋಗ್ಯ ಪರಿಹರಿಸಲು ನಿಯಮಿತ ಆರೋಗ್ಯ ಶಿಬಿರ ಒದಗಿಸಬೇಕು, ಶೌಚಾಲಯಗಳ ಸರಿಯಾದ ನಿರ್ವಹಣೆ ಮತ್ತು ನೈರ್ಮಲ್ಯ ಪ್ಯಾಡ್‌ಗಳನ್ನು ಸಂಗ್ರಹಿಸುವ ಯಂತ್ರಗಳು ಮತ್ತು ದಹನ ಯಂತ್ರ ಸ್ಥಾಪಿಸಬೇಕು

ಕೊಪ್ಪಳ: ರಾಜ್ಯ ಸರ್ಕಾರಿ ಉದ್ಯೋಗಸ್ಥ ಮಹಿಳೆಯರಿಗೆ ಋತಚಕ್ರ ( ಮುಟ್ಟಿನ) ರಜೆ ಘೋಷಣೆ ಮಾಡಿದ ಬೆನ್ನಲ್ಲೇ ಈಗ ವಿದ್ಯಾರ್ಥಿನಿಯರಿಗೂ ಋತುಚಕ್ರ ರಜೆಗೆ ಅವಕಾಶ ನೀಡಬೇಕು ಎನ್ನುವ ಕೂಗು ಎದ್ದಿದೆ.

ಈ ಕುರಿತು ಮಹಿಳಾ ಸಂಘಟನೆ ಹಾಗೂ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದು, ಸರ್ಕಾರ ತಕ್ಷಣ ಮುಟ್ಟಿನ ರಜೆ ಮತ್ತು ಮುಟ್ಟಿನ ಕುರಿತ ವೈಜ್ಞಾನಿಕ ಶಿಕ್ಷಣ ಅಳವಡಿಸಬೇಕು ಎನ್ನುವ ಆಗ್ರಹ ಕೇಳಿಬರಲಾರಂಭಿಸಿದೆ.

ಸಂಗಿನಿ ಪಿಂಕ್ ಪ್ಯಾಡ್ ಸಂಸ್ಥೆಯ ಭಾರತಿ ಗುಡ್ಲಾನೂರು ಹಾಗೂ ಸಹಜಾ ಟ್ರಸ್ಟ್ ಅಧ್ಯಕ್ಷೆ ಶೀಲಾ ಹಾಲ್ಕುರ್ಕಿ ವಿದ್ಯಾರ್ಥಿಗಳಲ್ಲಿ ಮತ್ತು ಮಹಿಳೆಯರಲ್ಲಿ ಋತುಚಕ್ರ ಸಮಸ್ಯೆಯ ಕುರಿತು ಸಾಕಷ್ಟು ಅಧ್ಯಯನ ಮಾಡಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಡೂರು ಮತ್ತು ತೋರಣಗಲ್ ಶಾಲೆಗಳಲ್ಲಿ ಮುಟ್ಟಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಾಗ 2000 ಹುಡುಗಿಯರಿಗೆ ಮುಟ್ಟಿನ ಕುರಿತು ಚರ್ಚೆ ಮಾಡಿದ್ದಾರೆ. ಶೇ.12 ರಿಂದ 15% ಹುಡುಗಿಯರು ಮುಟ್ಟಿನ ಸಮಯದಲ್ಲಿ ಗೈರು ಹಾಜರಾಗುತ್ತಾರೆ ಎನ್ನುವುದು ಗೊತ್ತಾಗಿದೆ. ಇನ್ನೂ ಶೇ.5 ರಿಂದ 7% ಹುಡುಗಿಯರು ಮುಟ್ಟಿನ ಸಮಸ್ಯೆಗಳೊಂದಿಗೆ ಬಲವಂತವಾಗಿ ಶಾಲೆಗೆ ಬರುತ್ತಾರೆ. ಅವರಿಗೆ ರಜೆಯ ಅಗತ್ಯವಿರುತ್ತದೆ ಎನ್ನುವುದು ಗೊತ್ತಾಯಿತು. 2 ಸಾವಿರ ವಿದ್ಯಾರ್ಥಿಗಳಲ್ಲಿ ಶೇ. 90 ರಷ್ಟು ವಿದ್ಯಾರ್ಥಿಗಳು ಮುಟ್ಟಿನ ರಜೆಯ ಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಾರೆ.

ಇದರ ಜತೆಗೆ ಕಡ್ಡಾಯ ಮುಟ್ಟಿನ ಶಿಕ್ಷಣ ನೀಡಬೇಕು, ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ ಒದಗಿಸಬೇಕು, ಮುಟ್ಟಿನ ಆರೋಗ್ಯ ಪರಿಹರಿಸಲು ನಿಯಮಿತ ಆರೋಗ್ಯ ಶಿಬಿರ ಒದಗಿಸಬೇಕು, ಶೌಚಾಲಯಗಳ ಸರಿಯಾದ ನಿರ್ವಹಣೆ ಮತ್ತು ನೈರ್ಮಲ್ಯ ಪ್ಯಾಡ್‌ಗಳನ್ನು ಸಂಗ್ರಹಿಸುವ ಯಂತ್ರಗಳು ಮತ್ತು ದಹನ ಯಂತ್ರ ಸ್ಥಾಪಿಸಬೇಕು. ಶಾಲೆಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳ ವ್ಯವಸ್ಥೆ, ನೀರಿನ ವ್ಯವಸ್ಥೆ ಸರಿಯಾಗಿ ಇರುವಂತೆ ಮಾಡುವುದು ಕೂಡ ಮುಟ್ಟಿನ ರಜೆಯೊಂದಿಗಿನ ಅವಶ್ಯಕತೆಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ಅನೇಕ ಶಾಲೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಮುಟ್ಟಿನ ರಜೆಯ ಬೇಡಿಕೆ ಇದೆ.ಆದರೆ, ಪಾಲಕರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಶಾಲೆ, ಕಾಲೇಜಿಗೆ ಆಗಮಿಸುತ್ತಾರೆ. ಆಗ ಅವರು ವಿಪರೀತ ಹಿಂಸೆ ಅನುಭವಿಸುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಅಭಿಪ್ರಾಯದಿಂದ ಗೊತ್ತಾಗಿದೆ ಎನ್ನುತ್ತಾರೆ ಭಾರತಿ ಗುಡ್ಲಾನೂರು.

ಈ ಕಾರಣಕ್ಕಾಗಿಯೇ ಈಗ ರಾಜ್ಯ ಸರ್ಕಾರ ಮುಟ್ಟಿನ ರಜೆಯನ್ನು ಉದ್ಯೋಗಸ್ಥ ಮಹಿಳೆಯರಿಗೆ ನೀಡಿದೆ.ಇದನ್ನೇ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಪಡೆಯುವ ಅರ್ಹತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಈ ದಿಸೆಯಲ್ಲಿಯೂ ಚಿಂತನೆ ಮಾಡಿ ಜಾರಿ ಮಾಡಲಿ ಎಂದು ಒತ್ತಾಯಿಸಿ, ಸರ್ಕಾರಕ್ಕೆ ಮನವಿ ಕಳುಹಿಸಿಕೊಟ್ಟಿದ್ದೇವೆ ಎನ್ನುತ್ತಾರೆ.

ಸುಸಜ್ಜಿತ ವ್ಯವಸ್ಥೆ: ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಸುಸಜ್ಜಿತ ಶೌಚಾಲಯಗಳ ವ್ಯವಸ್ಥೆ ಇಲ್ಲ.ಇದು ಸಹ ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿಗಳಿಗ ಸಾಕಷ್ಟು ಸಮಸ್ಯೆಯಾಗುತ್ತದೆ.ಇದೊಂದು ನೈಸರ್ಗಿಕ ಕ್ರಿಯೇ ಆಗಿರುವುದರಿಂದ ಯಾವಾಗ ಬೇಕಾದರೂ ನಡೆಯಬಹುದಾಗಿದೆ. ಹೀಗಾಗಿ, ಶಾಲೆ-ಕಾಲೇಜುಗಳಲ್ಲಿ ಶೌಚಾಲಯಗಳು ಸುಸಜ್ಜಿತವಾದರೇ ಮತ್ತು ಶಾಲಾ-ಕಾಲೇಜಿನಲ್ಲಿ ಪ್ಯಾಡ್ ಗಳು ದೊರೆಯುವಂತಹ ಸೌಲಭ್ಯ ಇದ್ದರೆ ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತದೆ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎನ್ನುತ್ತಾರೆ.

ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಿರುವುದು ಸ್ವಾಗತರ್ಹವಾಗಿದ್ದು, ಇದನ್ನು ಶಾಲಾ-ಕಾಲೇಜಿನಲ್ಲಿ ಅಳವಡಿಸಬೇಕು ಮತ್ತು ಜತೆಗೆ ಶಾಲೆಗಳಲ್ಲಿ ಶೌಚಾಲಯಗಳನ್ನು ಪ್ರತ್ಯೇಕವಾಗಿರುವಂತೆ ಮತ್ತು ಸುಸಜ್ಜಿತವಾಗಿರುವಂತೆ ಮಾಡಬೇಕು ಎಂದು ಸಂಗಿನಿ ಪಿಂಕ್ ಪ್ಯಾಡ್ ಸಂಸ್ಥೆಯ ಭಾರತಿ ಗುಡ್ಲಾನೂರು ತಿಳಿಸಿದ್ದಾರೆ.