ಕನ್ನಡಪ್ರಭ ವಾರ್ತೆ ಪಾವಗಡ
ಈಗಾಗಲೇ ವಿಜಯನಗರ ಜಿಲ್ಲೆ ಹೊಸಪೇಟೆ ಡ್ಯಾಂನಿಂದ 15ಲಕ್ಷ ಲೀಟರ್ ಸಾಮಾರ್ಥ್ಯದ ಬೃಹತ್ ಓವರ್‌ಹೆಡ್ ಟ್ಯಾಂಕ್‌ಗಳಿಗೆ ಪೂರೈಕೆ ಆಗಿದ್ದು ತುಂಗಭದ್ರಾ ಕುಡಿಯುವ ನೀರು ತಾಲೂಕಿನ ಮನೆಮನೆಗೆ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಿಜಯನಗರ ಹೊಸಪೇಟೆ ಡ್ಯಾಂನಿಂದ ಪೈಪ್ ಲೈನ್ ಮೂಲಕ ತುಂಗಭದ್ರಾ ಕುಡಿಯುವ ನೀರು ಪಾವಗಡಕ್ಕೆ ಸರಬರಾಜ್ ಆಗಿದ್ದು ಬೃಹತ್ ಮಟ್ಟದ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲಾಗಿದೆ. ಪೈಪ್‌ಲೈನ್ ಕಾಮಗಾರಿ ಹಾಗೂ ಶುದ್ಧ ನೀರಿನ ಕುರಿತು ಅಧಿಕಾರಿಗಳಿಂದ ಟೆಸ್ಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ತುಂಗಭದ್ರಾ ಕುಡಿಯುವ ನೀರು ಸರಬರಾಜ್‌ನ ಉದ್ಘಾಟನೆ ಕಾರ್ಯ ನಡೆಯಲಿದ್ದು ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಶಾಸಕರಾದ ಎಚ್.ವಿ.ವೆಂಕಟೇಶ್ ಅವರ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಗಳ ಕುರಿತು ವರದಿ ಪಡೆದು ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನ ಪ್ರತಿ ಗ್ರಾಮಗಳಿಗೆ ತುಂಗಭದ್ರಾ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿದ್ದು ಬೃಹತ್ ಟ್ಯಾಂಕ್‌ಗಳಿಗೆ ಪೂರೈಕೆ ಮಾಡಲಾಗಿದ್ದ ತುಂಗಭದ್ರೆಯನ್ನು ಪೈಪ್‌ಲೈನ್ ಮೂಲಕ ಈಗಾಗಲೇ ಬಹುತೇಕ ಗ್ರಾಮಗಳಿಗೆ ನೀರು ಸರಬರಾಜ್ ಮಾಡಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ವಾಟರ್ ಮ್ಯಾನ್‌ಗಳು ತುಂಗಭದ್ರಾ ನೀರು ಪೂರೈಕೆ ಬಗ್ಗೆ ಜನತೆಗೆ ಅರಿವು ಮೂಡಿಸಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಿಂದ ಶೀಘ್ರ ತುಂಗಭದ್ರಾ ಕುಡಿಯುವ ನೀರು ಸರಬರಾಜಿಗೆ ಮತ್ತೊಮ್ಮೆ ಅಧಿಕೃತ ಚಾಲನೆ ನೀಡುವುದಾಗಿ ಅವರು ತಿಳಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ನೀರಿನ ಪೂರೈಕೆ ಕುರಿತು ಶೀಘ್ರ ಅಧಿಕೃತ ಅದೇಶ ಜಾರಿಪಡಿಸಲಿರುವುದಾಗಿ ಅವರು ಹೇಳಿದರು.