ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ ಪಡೆದ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಇನ್ಫೋಸಿಸ್ ವಿರುದ್ಧ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಸೇರಿದಂತೆ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ ಪಡೆದ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಇನ್ಫೋಸಿಸ್ ವಿರುದ್ಧ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಸೇರಿದಂತೆ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದ್ದು, ಭೂಮಿ ಮತ್ತು ಹಣವನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಹಿಂತಿರುಗಿಸುವಂತೆ ಆಗ್ರಹಿಸಿದ್ದಾರೆ.
ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಕೆಐಎಡಿಬಿಯಿಂದ ಹಲವು ವರ್ಷಗಳ ಹಿಂದೆಯೇ ಇನ್ಫೋಸಿಸ್‌ಗೆ ಮಂಜೂರು ಮಾಡಲಾಗಿದ್ದ ಭೂಮಿಯ ಪೈಕಿ 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗೆ 250 ಕೋಟಿ ರು.ಗೆ ಮಾರಲು ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿರುವ ಕಾರ್ತಿ ಚಿದಂಬರಂ, ಒಂದು ನಿರ್ಧಿಷ್ಟ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ಭೂಮಿಯನ್ನು ಪಡೆಯಲಾಗಿದ್ದರೆ, ಆ ಉದ್ದೇಶಕ್ಕಾಗಿ ಭೂಮಿ ಬಳಸದಿದ್ದರೆ, ಅದನ್ನು ಮಾರಾಟ ಮಾಡುವ ಅಧಿಕಾರ ಭೂಮಿ ಪಡೆದ ಸಂಸ್ಥೆಗಿರುವುದಿಲ್ಲ. ಅದೇ ರೀತಿ ಇನ್ಫೋಸಿಸ್ ಕೂಡ ಬೇರೊಂದು ಸಂಸ್ಥೆಗೆ ಭೂಮಿ ಮಾರಾಟ ಮಾಡುವ ಹಕ್ಕನ್ನು ಹೊಂದಿಲ್ಲ. ಹೀಗಾಗಿ ಇನ್ಫೋಸಿಸ್ ಈ ಕೂಡಲೇ ಭೂಮಿ ಮತ್ತು ಹಣವನ್ನು ಕರ್ನಾಟಕ ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ನೀಡಿದ ರೈತರ ವಿರುದ್ಧ ಮಾತನಾಡಿದ್ದರು
ಕವಿತಾ ರೆಡ್ಡಿ ಎನ್ನುವವರು, ಈ ಹಿಂದೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ನೀಡಿದ ರೈತರ ವಿರುದ್ಧ ಮಾತನಾಡಿದ್ದರು. ಈಗ ಕೆಐಎಡಿಬಿಯಿಂದ ಕಡಿಮೆ ಬೆಲೆಗೆ ಪಡೆದ ಭೂಮಿಯನ್ನು ಮಾರಾಟ ಮಾಡಿದ ಇನ್ಫೋಸಿಸ್ ವಿರುದ್ಧ ಕಿರಣ್ ಮಜುಂದಾರ್ ಶಾ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಭರವಸೆ ನೀಡಿ ಇನ್ಫೋಸಿಸ್ ಸಂಸ್ಥೆ ಕೆಐಎಡಿಬಿಯಿಂದ ಭೂಮಿ ಪಡೆದುಕೊಂಡಿತ್ತು. ಈಗ ಆ ಭೂಮಿಯನ್ನು ರಿಯಲ್ ಎಸ್ಟೇಸ್ ಸಂಸ್ಥೆಗೆ ಮಾರಾಟ ಮಾಡಿರುವುದು ಖಂಡನೀಯ ಎಂದಿದ್ದಾರೆ.
ಕಣ್ಮುಚ್ಚಿ ಕುಳಿದ ಕೆಐಎಡಿಬಿ
ಇನ್ಪೋಸಿಸ್‌ನಿಂದ ಭೂಮಿ ಮಾರಾಟದ ಆರೋಪ ಕೇಳಿಬಂದಿದ್ದರೂ ಈ ಕುರಿತು ಪರಿಶೀಲಿಸಬೇಕಿದ್ದ ಕೆಐಎಡಿಬಿ ಈವರೆಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಇನ್ಫೋಸಿಸ್ ಭೂಮಿ ಮಾರಾಟ ಮಾಡಿದೆಯೇ? ಭೂಮಿ ಮಾರಾಟ ಮಾಡಿದ್ದರೆ ಕಾನೂನಾತ್ಮವಾಗಿ ಅದಕ್ಕೆ ಒಪ್ಪಿಗೆ ಇದೆಯೇ? ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ ಇನ್ಫೋಸಿಸ್ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರತಿಕ್ರಿಯೆ ಪಡೆಯಲು ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ। ಎಂ.ಮಹೇಶ್ ಅವರನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಇದನ್ನು ಬಂಡವಾಳಶಾಹಿ, ರಿಯಲ್ ಎಸ್ಟೇಟ್ ಮಾಫಿಯಾ ಏನೆಂದು ಕರೆಯಬೇಕು. ಇನ್ನು ಆನೆಕಲ್ ಭಾಗದ ರೈತರು ಭೂ ಸ್ವಾಧೀನದ ವಿರುದ್ಧ ಹೋರಾಟ ಮಾಡುತ್ತಿದ್ದು, ಕೆಐಎಡಿಬಿ ಭೂಮಿಯ ಸಂಪೂರ್ಣ ಲೆಕ್ಕಪರಿಶೋಧನೆ, ಹಂಚಿಕೆ, ಬಳಕೆ, ಹೂಡಿಕೆ, ಉದ್ಯೋಗ ಸೃಷ್ಟಿ ಸೇರಿದಂತೆ ಇನ್ನಿತರ ವಿಚಾರವಾಗಿ ಶ್ವೇತಪತ್ರ ಹೊರಡಿಸುವಂತೆಯೂ ಆಗ್ರಹಿಸುತ್ತಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

