2 ವರ್ಷ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದ ಇನ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌, ಪ್ರತಿಷ್ಠಿತ ಹೂಡಿಕೆ ಬ್ಯಾಂಕಿಂಗ್‌ ಕಂಪನಿ ಗೋಲ್ಡ್‌ಮ್ಯಾನ್‌ ಸ್ಯಾಚ್ಸ್‌ಗೆ ಹಿರಿಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ನವದೆಹಲಿ: 2 ವರ್ಷ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದ ಇನ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌, ಪ್ರತಿಷ್ಠಿತ ಹೂಡಿಕೆ ಬ್ಯಾಂಕಿಂಗ್‌ ಕಂಪನಿ ಗೋಲ್ಡ್‌ಮ್ಯಾನ್‌ ಸ್ಯಾಚ್ಸ್‌ಗೆ ಹಿರಿಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

 ಈ ಬಗ್ಗೆ ಸ್ವತಃ ಗೋಲ್ಡ್‌ಮ್ಯಾನ್‌ ಸ್ಯಾಚ್ಸ್‌ ಸಂಸ್ಥೆಯೇ ದೃಢಪಡಿಸಿದ್ದು, ಸುನಾಕ್ ತಮ್ಮ ಕಂಪನಿಯ ಜೊತೆಗೆ ಕೆಲಸ ಮಾಡಿ ಜಾಗತಿಕವಾಗಿ ವಿವಿಧ ವಿಚಾರಗಳ ಬಗ್ಗೆ ಸಲಹೆ ನೀಡಲಿದ್ದಾರೆ ಎಂದಿದೆ. ಈ ಹಿಂದೆಯೂ ಸುನಾಕ್ ಗೋಲ್ಡ್‌ಮ್ಯಾನ್‌ ಜತೆಗೆ ನಂಟು ಹೊಂದಿದ್ದು, 2000 ನೇ ಇಸವಿಯಲ್ಲಿ ಇಂಟರ್ನ್‌ ಆಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ 2001 - 2004 ವಿಶ್ಲೇಷಕರಾಗಿದ್ದರು.

ಖಾಸಗಿ ವಿಡಿಯೋ ಬಳಸಿ 3 ಕೋಟಿ ಸುಲಿಗೆ: ನೊಂದ ಸಿಎ ಆತ್ಮಹತ್ಯೆಗೆ ಶರಣು

ಮುಂಬೈ: ತಮ್ಮ ಖಾಸಗಿ ವಿಡಿಯೋ ಬಳಸಿಕೊಂಡು ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದವರಿಂದ ಬೇಸತ್ತು, ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಮರಣ ಪತ್ರ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ರಾಜ್‌ ಲೀಲಾ ಮೋರ್‌ ಮೃತರು. ಸಾವಿಗೂ ಮುನ್ನ 3 ಪುಟಗಳ ಪತ್ರ ಬಿಟ್ಟು ಹೋಗಿರುವ ಮೋರ್‌ (32), ‘3 ಕೋಟಿ ರು. ಕೊಡದಿದ್ದರೆ ಖಾಸಗಿ ವಿಡಿಯೋ ಹರಿಬಿಡುವುದಾಗಿ ಕಳೆದ 18 ತಿಂಗಳಿಂದ ರಾಹುಲ್ ಪರ್ವಾನಿ ಮತ್ತು ಸಭಾ ಖುರೇಷಿ ನನ್ನನ್ನು ಪೀಡಿಸಿ ಕೋಟಿಗಟ್ಟಲೆ ಹಣ ಪಡೆದಿದ್ದಾರೆ. ನನ್ನ ಸಾವಿಗೆ ಅವರೇ ಕಾರಣ’ ಎಂದು ಅದರಲ್ಲಿ ಬರೆದಿದ್ದಾರೆ. ಜತೆಗೆ, ತಮ್ಮ ನಿರ್ಧಾರಕ್ಕೆ ತಾಯಿಯ ಬಳಿ ಕ್ಷಮೆಯಾಚಿಸಿ, ಸಹೋದ್ಯೋಗಿಗಳಿಗೂ ಕೊನೆಯ ಸಂದೇಶ ಬಿಟ್ಟು ಹೋಗಿದ್ದಾರೆ.

1 ಎಪಿಸೋಡ್‌ಗೆ ಸ್ಮೃತಿ ಕ್ಯೂಂ ಕೀ ಧಾರಾವಾಹಿ ಸಂಭಾವನೆ 14 ಲಕ್ಷ!

ನವದೆಹಲಿ: ದಶಕಗಳ ಬಳಿಕ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಮೂಲಕ ಮತ್ತೆ ಕಿರುತೆಗೆ ಮರಳಿದ್ದು, ಅವರ ಸಂಭಾವನೆ, ವೃತ್ತಿ ಬದುಕಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. 

ಸ್ಮೃತಿ ಇರಾನಿ 2000 ಇಸವಿಯಲ್ಲಿ ಪ್ರತಿ ಸಂಚಿಕೆಗೆ 1800 ಸಂಭಾವನೆ ಪಡೆಯುತ್ತಿದ್ದರು. 25 ವರ್ಷಗಳಲ್ಲಿ ಆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು 14 ಲಕ್ಷ ರು. ಒಂದು ದಿನಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಧಾರವಾಹಿ ತಂಡವಾಗಲಿ, ಸ್ಮೃತಿ ಇರಾನಿ ಅವರಾಗಲಿ ಸ್ಪಷ್ಟಪಡಿಸಿಲ್ಲ. 

ಜೂ.29ರಿಂದ ಧಾರವಾಹಿ ಪ್ರಸಾರವಾಗಲಿದ್ದು ತುಳಸಿ ಪಾತ್ರದಲ್ಲಿ ಮಿಂಚಲಿದ್ದಾರೆ. ,ಈ ಕುರಿತು ಸಂದರ್ಶನವೊಂದರಲ್ಲಿ ಮಾಜಿ ಸಚಿವೆ ಕೂಡ ಮಾತನಾಡಿದ್ದು ‘ನಾನು ಅರೆಕಾಲಿಕ ನಟಿ, ಪೂರ್ಣ ಪ್ರಮಾಣದ ರಾಜಕಾರಣಿ’ ಎಂದಿದ್ದಾರೆ.

ರಾಷ್ಟ್ರಪತಿಯನ್ನು ಮುರ್ಮಾ, ಕೋವಿಂದ್‌ರನ್ನು ಕೋವಿಡ್‌ ಎಂದ ಖರ್ಗೆ : ಬಿಜೆಪಿ ಟೀಕೆ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಹೆಸರು ಹೇಳುವಾಗ, ‘ಮುರ್ಮಾ’ ಮತ್ತು ‘ಕೋವಿಡ್‌’ ಎಂದು ಹೇಳಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುಜ ಖರ್ಗೆ ಎಡವಟ್ಟು ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯ ಟೀಕೆಗೆ ಆಹಾರವೂ ಆಗಿದ್ದಾರೆ. 

ಛತ್ತೀಸಗಢದ ರಾಯ್ಪುರದಲ್ಲಿ ಕಾರ್ಯಕ್ರಮದವೊಂದರಲ್ಲಿ ಸೋಮವಾರ ಮಾತನಾಡಿದ್ದ ಖರ್ಗೆ, ‘ನಾವು ಮುರ್ಮ ಹಾಗೂ ಕೋವಿಡ್‌ ಅವರನ್ನು ರಾಷ್ಟ್ರಪತಿ ಮಾಡಿದೆವು ಎಂದು ಬಿಜೆಪಿ ಹೇಳುತ್ತದೆ. ನಮ್ಮ ಸಂಪನ್ಮೂಲ, ಕಾಡು, ನೀರು, ಜಮೀನನ್ನು ಕಸಿಯಲು ಮಾಡಿದರೇ? ಆ ಜಾಗಗಳನ್ನಿಂದು ಅದಾನಿ, ಅಂಬಾನಿಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದರು.ಇದನ್ನು ಟೀಕಿಸಿರುವ ಬಿಜೆಪಿ, ‘ಖರ್ಗೆಯವರು ತಮ್ಮ ಹೇಳಿಕೆಯಿಂದ ಮಹಿಳೆಯರು, ದಲಿತರು ಮತ್ತು ಬುಡಕಟ್ಟು ವರ್ಗದವರನ್ನು ಅವಮಾನಿಸಿದ್ದಾರೆ. ಸಾಂವಿಧಾನಿಕ ಹುದ್ದೆಗೂ ಅವಮಾನವಾಗಿದೆ’ ಎಂದು ತಿರುಗೇಟು ನೀಡಿದೆ.