ನನ್ನ ಹಿಂದೂ ಧರ್ಮವೇ ನನಗ ಸ್ಫೂರ್ತಿ: ರಿಷಿ ಸುನಕ್‌

| Published : Jul 01 2024, 01:49 AM IST / Updated: Jul 01 2024, 04:31 AM IST

ಸಾರಾಂಶ

ಜು.4ರಂದು ನಡೆಯಲಿರುವ ಸಂಸತ್‌ ಚುನಾವಣೆಗೂ ಮುನ್ನ ಬ್ರಿಟನ್‌ನ ಹಾಲಿ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಆಪ್ತ ರಾಜಕೀಯ ನಾಯಕರು ಭರ್ಜರಿ ದೇಗುಲ ಭೇಟಿ ನಡೆಸಿದ್ದಾರೆ.

ಲಂಡನ್‌: ಜು.4ರಂದು ನಡೆಯಲಿರುವ ಸಂಸತ್‌ ಚುನಾವಣೆಗೂ ಮುನ್ನ ಬ್ರಿಟನ್‌ನ ಹಾಲಿ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಆಪ್ತ ರಾಜಕೀಯ ನಾಯಕರು ಭರ್ಜರಿ ದೇಗುಲ ಭೇಟಿ ನಡೆಸಿದ್ದಾರೆ. ಈ ಮೂಲಕ ಸಾಕಷ್ಟು ಪ್ರಮಾಣದಲ್ಲಿರುವ ಹಿಂದೂಗಳ ಮತಬೇಟೆಗೆ ಮುಂದಾಗಿದ್ದಾರೆ. ಅಲ್ಲದೆ ) ನನ್ನ ಹಿಂದೂ ಧರ್ಮವೇ ನನಗ ಸ್ಫೂರ್ತಿ ಎಂಬ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.

ರಿಷಿ ಸುನಕ್‌, ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೂಡಿ ಶನಿವಾರ ನಿಯಾಸ್‌ಡೆನ್‌ನಲ್ಲಿರುವ ಸ್ವಾಮಿ ನಾರಾಯಣ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಸಮುದಾಯದ ನಾಯಕರೊಂದಿಗೆ ಸಂವಾದ ನಡೆಸಿದ ಸುನಕ್‌, ‘ನಿಮ್ಮೆಲ್ಲರಂತೆ ನಾನು ಕೂಡಾ ಹಿಂದೂ. ನಾನು ನಮ್ಮ ಧರ್ಮದಿಂದಲೇ ಸ್ಪೂರ್ತಿ ಮತ್ತು ನೆಮ್ಮದಿ ಪಡೆಯುತ್ತೇನೆ. ಭಗವದ್ಗೀತೆ ಮೇಲೆ ಕೈಇಟ್ಟು ಬ್ರಿಟನ್‌ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ನನ್ನ ಧರ್ಮ ನನಗೆ ಸಂಸ್ಕೃತಿಯನ್ನು ಕಲಿಸಿದೆ. ಅದನ್ನೇ ನಾನು ನಾನು ಮಕ್ಕಳ ಮೂಲಕ ಮುಂದಿನ ತಲೆಮಾರಿಗೆ ವರ್ಗಾಯಿಸಲು ಬಯಸುತ್ತೇನೆ. ಸಮಾಜಸೇವೆಗೆ ನನಗೆ ಧರ್ಮವೇ ಮಾರ್ಗದರ್ಶಕ’ ಎಂದು ಬಣ್ಣಿಸಿದರು.

ದೇಗುಲಗಳಿಗೆ ಸುನಕ್‌ ವಿರೋಧಿಯ ಭೇಟಿ: ಈ ನಡುವೆ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ ವಿರುದ್ಧ ಪ್ರಧಾನಿ ಅಭ್ಯರ್ಥಿಯಾಗಿರುವ ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌ ಕೂಡಾ ಶನಿವಾರ ಕಿಂಗ್ಸ್‌ಬರಿಯಲ್ಲಿರುವ ಸ್ವಾಮಿನಾರಾಯಣದ ದೇಗುಲಕ್ಕೆ ಭೇಟಿ ನೀಡುವ ಮೂಲಕ ಹಿಂದೂಗಳ ಮತಬೇಟೆಗೆ ಪ್ರಯತ್ನ ನಡೆಸಿದರು. ಜೊತೆಗೆ ದೇಶದಲ್ಲಿ ಹಿಂದೂವಿರೋಧಿ ಮನೋಭಾವ ಬೆಳೆಯಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.