ಮಗುವಿನ ಸರ್ವಾಂಗೀಣ ವಿಕಾಸಕ್ಕೆ ರಂಗಭೂಮಿ ಭದ್ರ ಬುನಾದಿ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Nov 04, 2026, 01:30 AM IST
3ಎಂಡಿಜಿ2, ಮುಂಡರಗಿ ತಾಲೂಕಿನ ಹೆಸರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಹೌದು ಇದು ಮಕ್ಕಳಾಟ ಮೂರು ದಿನಗಳ ರಂಗ ಶಿಬಿರವನ್ನು ಮಕ್ಕಳ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ನಿಂಗು ಸೊಲಗಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನದಲ್ಲಿ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಅಭಿವ್ಯಕ್ತಿ ಕೌಶಲ, ಏಕಾಗ್ರತೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ರಂಗಕಲೆಗಳು ಪರಿಣಾಮಕಾರಿ ಮಾಧ್ಯಮಗಳಾಗಿವೆ.

ಹೌದು ಇದು ಮಕ್ಕಳಾಟ ಮೂರು ದಿನಗಳ ರಂಗ ಶಿಬಿರ

ಕನ್ನಡಪ್ರಭ ವಾರ್ತೆ ಮುಂಡರಗಿ

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನದಲ್ಲಿ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಅಭಿವ್ಯಕ್ತಿ ಕೌಶಲ, ಏಕಾಗ್ರತೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ರಂಗಕಲೆಗಳು ಪರಿಣಾಮಕಾರಿ ಮಾಧ್ಯಮಗಳಾಗಿವೆ ಎಂದು ಮಕ್ಕಳ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ನಿಂಗು ಸೊಲಗಿ ಹೇಳಿದರು.

ತಾಲೂಕಿನ ಹೆಸರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ನೃತ್ಯ ನಾಟಕ ಸಂಸ್ಥೆ (ಸನನಾ), ಡೋಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಬ್ರೈನ್ ಟ್ಯೂನ್ ಅಕಾಡೆಮಿ ಹಮ್ಮಿಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಹೌದು ಇದು ಮಕ್ಕಳಾಟ ಮೂರು ದಿನಗಳ ರಂಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮನೋವಿಕಾಸಕ್ಕೆ ಪಠ್ಯಪುಸ್ತಕದ ಕಲಿಕೆಯ ಜೊತೆಗೆ ಇತರೆ ವಿವಿಧ ಚಟುವಟಿಕೆಗಳು ಅಗತ್ಯ. ರಂಗಭೂಮಿ ಮಕ್ಕಳಲ್ಲಿನ ನಕಾರಾತ್ಮಕ ಭಾವನೆಗಳನ್ನು ದೂರ ಮಾಡಿ, ಸಕಾರಾತ್ಮಕ ಮೌಲ್ಯಗಳನ್ನು ಬೆಳೆಸುತ್ತದೆ. ಪಾತ್ರಾಭಿನಯ, ಸಂಭಾಷಣೆ, ಹಾಡು, ನೃತ್ಯ ಮತ್ತು ನಾಟಕದ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಮಗುವಿನಲ್ಲಿಯೂ ಒಬ್ಬ ಕಲಾವಿದನಿದ್ದಾನೆ. ಆ ಪ್ರತಿಭೆಯನ್ನು ಸೂಕ್ತ ಸಮಯದಲ್ಲಿ ಗುರುತಿಸಿ, ಅವಕಾಶ ಕಲ್ಪಿಸುವುದು ಶಿಕ್ಷಕರು ಮತ್ತು ಸಮಾಜದ ಜವಾಬ್ದಾರಿಯಾಗಿದೆ. ನಮ್ಮ ಮಾನಸಿಕ ಆರೋಗ್ಯ ಮತ್ತು ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಲು ಭಜನೆ, ಡೊಳ್ಳು, ಸೋಬಾನೆ, ಹಂತಿಪದಗಳಂತಹ ಸ್ಥಳೀಯ ಜನಪದ ಕಲೆಗಳಿಗೆ ಮರುಜೀವ ನೀಡಬೇಕು. ಇಂತಹ ಕಲೆಗಳ ಪರಿಚಯ ಮಕ್ಕಳನ್ನು ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆಯುತ್ತದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ವೀರೇಶ ಶಾಸ್ತ್ರಿಮಠ ಹಾಗೂ ಗರುಡಪ್ಪ ಜಂತಲಿ ಮಾತನಾಡಿ, ಮಕ್ಕಳಿಗೆ ಸತತ ಪರಿಶ್ರಮ, ಕಲಿಯುವ ಹಂಬಲ ಮತ್ತು ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮನೋಭಾವ ಇರಬೇಕು. ಇಂತಹ ಶಿಬಿರಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಜೀವನದ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನೂ ನೀಡುತ್ತವೆ ಎಂದರು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶೃತಿ ರಮೇಶ ಆರೇರ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯಯೋಪಾಧ್ಯಾಯ ಎಸ್.ಸಿ. ಹರ್ತಿ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುನಂದಾ ನಿಂಬನಗೌಡರ, ಸಂಚಾಲಕರಾಗಿ ರವಿ ದೇವರಡ್ಡಿ ಕಾರ್ಯನಿರ್ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸತ್ಯಪ್ಪ ಸತ್ಯಮ್ಮನಗುಡಿ, ಖಾದರಸಾಬ ಪಾಳೇದ, ನಾಗರಾಜ ಸಾಳುಂಕೆ, ಪಿ.ಎಂ. ಲಾಂಡೆ, ಎಸ್.ಎಚ್. ಇಮ್ರಾಪುರ, ರೇಣುಕಾ ನೋಟಗಾರ ಉಪಸ್ಥಿತರಿದ್ದರು. ಎಚ್.ಎನ್. ಹಿರೇಮಠ ಸ್ವಾಗತಿಸಿದರು. ರವಿ ದೇವರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಎಸ್.ಎಚ್. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌