ಹಾವೇರಿ: ಜೀವನವನ್ನು ಸಮಗ್ರವಾಗಿ ನೋಡಲು ಮತ್ತು ತಿಳಿಯಲು ತರಬೇತಿ ನೀಡುವ ರಂಗಭೂಮಿಯೇ ಸಮಾಜದ ನಿಜವಾದ ಶಾಲೆ ಎಂದು ಹಾವೇರಿ ವಿಶ್ವವಿದ್ಯಾಲಯದ ನೂತನ ಕುಲಸಚಿವರಾದ (ಮೌಲ್ಯಮಾಪನ) ಡಾ. ರೇಣುಕಾ ಮೇಟಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ಮಕ್ಕಳಲ್ಲಿ ರಂಭೂಮಿಯ ಅಭಿರುಚಿ ಬೆಳೆಸಬೇಕು. ಅಂದಾಗ ಮಾತ್ರ ಅವರ ವ್ಯಕ್ತಿತ್ವದಲ್ಲಿ ಸಮಗ್ರತೆ ಬರಲು ಸಾಧ್ಯ. ತಾಳ್ಮೆ ಮತ್ತು ಸಹಬಾಳ್ವೆಯನ್ನು ರಂಗಭೂಮಿ ಕಲಿಸುತ್ತದೆ ಎಂದರು.
ಜಾನಪದ ರಂಗಭೂಮಿ ಕುರಿತು ಪರಿಮಳಾ ಜೈನ್ ಉಪನ್ಯಾಸ ನೀಡಿ, ರಂಗಭೂಮಿ ಯಾರನ್ನೂ ಕೊಲ್ಲುವುದಿಲ್ಲ. ದೈವಾರಾಧನೆಯ ಮೂಲಕ ಹುಟ್ಟಿದ ಜಾನಪದ ಮನುಷ್ಯನನ್ನೇ ದೈವವಾಗಿಸಿತು. ಧ್ವನಿಯೆತ್ತಿ ಸಮಾಜದೆದುರು ಮಾತನಾಡುವುದನ್ನು ಕಲಿಸಿತು. ಇಂತಹ ಜಾನಪದವನ್ನು ಯುವ ಜನಾಂಗ ಎತ್ತಿಕೊಳ್ಳಬೇಕು ಎಂದರು.ಕನ್ನಡ ರಂಗಭೂಮಿಯ ಪ್ರಾಚೀನತೆ ಕುರಿತು ಮನು ಬೆಳವಲದವರ ಮಾತನಾಡಿ, ಕನ್ನಡ ರಂಗಭೂಮಿಯ ಪ್ರಾಚೀನತೆಯ ಅರಿವು ಎಲ್ಲರಿಗೂ ಬೇಕು ಎಂದರು.
ಹವ್ಯಾಸಿ ರಂಗಭೂಮಿಯ ಬಗ್ಗೆ ಪುಷ್ಪಾ ಬಾರಕೇರ ಮಾತನಾಡಿ, ಬಿ.ವಿ. ಕಾರಂತ ಮತ್ತು ಗಿರೀಶ ಕಾರ್ನಾಡ ಹವ್ಯಾಸಿ ರಂಗಭೂಮಿಗೆ ನೀಡಿದ ಕೊಡುಗೆ ಬಲು ದೊಡ್ಡದು ಎಂದರು.ರಂಗಭೂಮಿಗೆ ಅನನ್ಯ ಸೇವೆ ಸಲ್ಲಿಸಿದ ನಾಗರಾಜ ನಡುವಿನಮಠ (ಸಂಘಟನೆ), ಪ್ರಕಾಶಗೌಡ ಗಡಿಯಪ್ಪಗೌಡರ (ಬೀದಿ ನಾಟಕ), ದೇವಿಪ್ರಸಾದ ಯರತೋಟಿ (ಮಕ್ಕಳ ರಂಭೂಮಿ), ಕೋಮಲಾ ಛಲವಾದಿ (ನಟಿ) ಹಾಗೂ ಗುರುನಂಜಪ್ಪ ಕುಂಬಾರಿ (ವೀರಗಾಸೆ) ಅವರ ಜತೆಗೆ ನೂತನ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ರೇಣುಕಾ ಅವರನ್ನು ಸನ್ಮಾನಿಸಲಾಯಿತು.
ದೊಡ್ಡಮನುಷ್ಯ, ಲಿಫ್ಟ್ ಹಾಗೂ ಪಂ. ಪುಟ್ಟರಾಜ ಗವಾಯಿಗಳು ಎಂಬ ಮೂರು ಕಿರು ನಾಟಕಗಳು ಪ್ರದರ್ಶನಗೊಂಡವು.ಸಮಾರಂಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರ, ಪ್ರಾಚಾರ್ಯರಾದ ಸಂಧ್ಯಾ ಆರ್. ಕುಲಕಲರ್ಣಿ, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಆರ್.ವಿ. ಚಿನ್ನಿಕಟ್ಟಿ, ಡಾ. ಜಗದೀಶ ಹೊಸಮನಿ, ಜಿಲ್ಲಾ ಕಲಾ ಬಳಗದ ಕೆ.ಆರ್. ಹಿರೇಮಠ, ಕನ್ನಡ ವಿಭಾಗದ ಶ್ರೀದೇವಿ ದೊಡ್ಡಮನಿ, ಡಾ. ಮಹಾದೇವಿ ಕಣವಿ, ರೂಪಾ ಕೋರೆ, ಕಾರ್ಯಕ್ರಮ ಸಂಘಟಕರಾದ ಸಂಜೀವ ಆರ್. ನಾಯಕ್ ಪಾಲ್ಗೊಂಡಿದ್ದರು. ಕಲಾ ಬಳಗದ ಅನಿತಾ ಮಂಜುನಾಥ ವಂದಿಸಿದರು.