ಸಿದ್ದಾಪುರ: ನಮ್ಮ ದೇಶದ ತಾಯಂದಿರು, ಅಕ್ಕ-ತಂಗಿಯರು ಸುರಕ್ಷಿತವಾಗಿರಬೇಕಾದರೆ ಪ್ರತಿ ಹಿಂದೂವಿನ ಮನೆಯಲ್ಲೂ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜೀಜಾಬಾಯಿಯಂತಹ ವೀರ ವನಿತೆಯರು ಹುಟ್ಟುವಂತಾಗಬೇಕು ಎಂದು ಶ್ರೀರಾಮ ಸೇನೆಯ ಪ್ರಮುಖ ಪ್ರಮೋದ ಮುತಾಲಿಕ್ ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ನಾವು ಇಂದು ಪಾಶ್ಚಿಮಾತ್ಯ ಜೀವನ ಕ್ರಮದಿಂದ ಆಕರ್ಷಿತರಾಗುತ್ತಿದ್ದೇವೆ. ಅದು ಸರಿಯಾದ ಕ್ರಮವಲ್ಲ. ನಮ್ಮ ಗುರು ಹಿರಿಯರು ತೋರಿಸಿದ ಮಾರ್ಗವೇ ಧರ್ಮ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುವಂತಾಗಬೇಕು ಎಂದರು.
ಸಭೆಯ ಸಾನ್ನಿಧ್ಯ ವಹಿಸಿದ್ದ ಶಿರಳಗಿ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಿ, ಯುಗಾದಿ ಹಿಂದುತ್ವದ ಪ್ರಜ್ಞೆ ಜಾಗ್ರತ ಮಾಡಿಕೊಳ್ಳುವ ದಿನ. ಹಿಂದೂಗಳು ಧರ್ಮ ಗ್ರಂಥವನ್ನು ಅಭ್ಯಾಸ ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು. ಭಗವಂತನೇ ಸ್ಥಾಪಿಸಿದ ಸನಾತನ ಧರ್ಮ ಇದಾಗಿರುವುದರಿಂದ ಸನಾತನ ಧರ್ಮ ಯಾವಾಗಲೂ ಶಾಶ್ವತವಾಗಿರುತ್ತದೆ ಎಂದರು.ಯುಗಾದಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಈರಾ ನಾಯ್ಕ, ಖಜಾಂಚಿ ಸುದರ್ಶನ ಪಿಳ್ಳೆ ಉಪಸ್ಥಿತರಿದ್ದರು.
ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಶ್ರೀಧರ ವೈದ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ವಂದಿಸಿದರು. ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.