)
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಟ್ಟಣಕುಡಿ ಗ್ರಾಮದ ಮಹಾತ್ ಗೋಡೌನ್ ಸಮೀಪ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿರುವ ಗ್ರಾಪಂ ವ್ಯಾಪ್ತಿಯ ಕೊಳವೆಬಾವಿಗೆ ಅಳವಡಿಸಿದ್ದ ತಲಾ 600 ಅಡಿ ಉದ್ದದ 2 ಕೇಬಲ್ ಬಂಡಲ್‌ಗಳನ್ನು ಕಳ್ಳರು ಕಳವು ಮಾಡಿದ್ದರು. ಸುಮಾರು ₹60 ಸಾವಿರ ಮೌಲ್ಯದ ಕೇಬಲ್ ಕಳವು ಕುರಿತು ಪಟ್ಟಣಕುಡಿ ಪಿಡಿಒ ಖುರ್ಷಿದ್ ಆಲಂ ಅಬ್ದುಲ್‌ರಹೀಂ ಮೊಮಿನ್ ಅವರು ಜುಲೈ 21ರಂದು ಖಡಕಲಾಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ನ.14ರಂದು ಪಟ್ಟಣಕುಡಿ ಗ್ರಾಮದ ಮಹಾತ್ ಗೋಡೌನ್ ಸಮೀಪ ಮೋಟಾರ್ ಸೈಕಲ್‌ನಲ್ಲಿ ಕೇಬಲ್ ಸಾಗಿಸುತ್ತಿದ್ದ ವಿಶಾಲ ಸಂಜು ಘಸ್ತೆ (27) ಎಂಬಾತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ತನ್ನ ಸ್ನೇಹಿತ ರಾಕೇಶ ರಾಜು ಘಸ್ತೆ ಎಂಬಾತನೊಂದಿಗೆ ಸೇರಿ ಪಟ್ಟಣಕುಡಿ ಹಾಗೂ ನಿಪ್ಪಾಣಿ ತಾಲೂಕಿನ ಗವಾನಿ ಗ್ರಾಮದಲ್ಲಿ ಬೋರ್‌ವೆಲ್ ಕೇಬಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಆರೋಪಿಯಿಂದ ಒಟ್ಟು 1,400 ಅಡಿ ಉದ್ದದ ಕೇಬಲ್ ಹಾಗೂ ಕಳವು ಕೃತ್ಯಕ್ಕೆ ಬಳಸಿದ್ದ ಕೆಎ-27, ಇಡಿ-1632 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ಯುಗ-110 ಮೋಟಾರ್‌ಸೈಕಲ್ ಜಪ್ತಿ ಮಾಡಲಾಗಿದೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿ ರಾಕೇಶ ರಾಜು ಘಸ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪ್ರಶಂಸಿಸಿದ್ದಾರೆ.