ಗದಗ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಸಿ ಯಂತ್ರಗಳಿಗೆ ಅಳವಡಿಸಿದ್ದ ತಾಮ್ರದ ಪೈಪ್‌ಗಳ ಕಳ್ಳತನ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ವರದಿಗೆ ಸರ್ಕಾರ ಸ್ಪಂದಿಸಿದ್ದು, ಆದ್ಯತೆ ಮೇರೆಗೆ ಪರಿಶೀಲಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದೆ.
ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದು, ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಮುಖ್ಯಮಂತ್ರಿಯವರ ಕಚೇರಿಯಿಂದ ನೇರವಾಗಿ ಸ್ಪಂದನೆ ದೊರೆತಿರುವುದು ಸಾರ್ವಜನಿಕ ಸಮಸ್ಯೆಗಳ ಕುರಿತು ಕನ್ನಡಪ್ರಭ ಪ್ರಕಟಿಸುವ ವರದಿಗಳ ವಿಶ್ವಾಸಾರ್ಹತೆ ಮತ್ತೊಂದು ಸಾಕ್ಷಿಯಾಗಿದೆ. ಸರ್ಕಾರದ ಸೂಚನೆಯ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಾಸ್ತವಾಂಶ ಪರಿಶೀಲಿಸಿ ತುರ್ತಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ದಾಖಲೆಗಳ ಸಮೇತ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.