ಗದಗ: ಗದಗ ಜಿಲ್ಲೆ ಭಾವೈಕ್ಯತೆಯ ನಾಡಾಗಿದ್ದು, ಕೋವಿಡ್ ಸಂದರ್ಭದಲ್ಲಿ ಮನುಕುಲಕ್ಕಾಗಿ ಭಿಕ್ಷೆ ನಡೆಸಲಾಗಿತ್ತು, ಇಂದು ಸಮಾನತೆಗಾಗಿ ಭೀಮ ಮಂದಿರ ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಏ.14 ರಂದು ಗದಗ ನಗರದಲ್ಲಿ ಭೀಮ, ರಾಮ, ಬುದ್ದ, ಬಸವ, ಶರೀಪರ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ತೋಂಟದಾರ್ಯ ಮಠದ ಆವರಣದಿಂದ ಭಾನುವಾರ ಸಂಜೆ 4 ಕ್ಕೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯುದ್ದಕ್ಕೂ ವಿವಿಧ ಕಲಾ ತಂಡಗಳು ಭಾಗವಹಿಸಲಿದ್ದು, ಅಂಬೇಡ್ಕರ ಸಂವಿಧಾನ ಗ್ರಂಥವೂ ಮೆರವಣಿಗೆಯಲ್ಲಿರಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಜನಾಂಗದವರು ಭಾಗವಹಿಸಲಿದ್ದಾರೆ ಎಂದರು.ಇತ್ತೀಚೆಗೆ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಇಸ್ರಿ ಕುಟುಂಬದವರು ಭೀಮ, ರಾಮ, ಬುದ್ದ, ಬಸವ, ಶರೀಫರ ಮಂದಿರ ಆಗಬೇಕೆಂದು ಎರಡು ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಜಾತಿ ವ್ಯವಸ್ಥೆ ಮರೆತು ಮನುಷ್ಯರು ಮನುಷ್ಯರಾಗಿ ಬಾಳಲಿ ಎನ್ನುವ ಉದ್ದೇಶದಿಂದ ಭೀಮ ಮಂದಿರ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಚುನಾವಣೆ ಮುಗಿದ ನಂತರ ಭೀಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಸಮಾನತೆ ಸಾರಿದ ಮಹಾತ್ಮರ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಚುನಾವಣೆ ಸಮಯದಲ್ಲಿ ರೊಟ್ಟಿ ಅಭಿಯಾನ ಮಾಡಿದ್ದೆ. ಪ್ರೀತಿಯಿಂದ ಎಲ್ಲ ಜನಾಂಗದವರು ಒಂದು ತುತ್ತು ರೊಟ್ಟಿ ನೀಡಿದ್ದಾರೆ. ಇಂತಹ ಮಾನವೀಯ ಗುಣ ಹೊಂದಿದ ಈ ನಾಡಿನಲ್ಲಿ ಭೀಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ನಮ್ಮೆಲ್ಲರ ಕನಸಾಗಿದೆ ಎಂದರು.
ಅನಿಲ ಅವರನ್ನು ಪಕ್ಷದವರೇ ಸೋಲಿಸಿದ್ದಾರೆ ಎನ್ನುವ ಆರೋಪಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅದಕ್ಕೆಲ್ಲ ಇದು ಸಮಯವಲ್ಲ, ಸದ್ಯ ಬೊಮ್ಮಾಯಿ ಅವರು ಚುನಾವಣೆ ನಡೆಸಬೇಕಿದೆ. ದೇಶಕ್ಕೆ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಿದೆ. ಸದ್ಯಕ್ಕೆ ಆ ಬಗ್ಗೆ ನಾನೇನೂ ಮಾತನಾಡಲ್ಲ ಎಂದು ಸೌಮ್ಯವಾಗಿಯೇ ಅಸಮಾಧಾನ ಹೊರಹಾಕಿದರು.ಈ ಸಂದರ್ಭದಲ್ಲಿ ಮುಖಂಡರಾದ ಕಾಂತಿಲಾಲ್ ಬನಸಾಲಿ, ರವಿ ಶಿದ್ಲಿಂಗ, ಚಂದ್ರಶೇಖರ ಹರಿಜನ, ಪರಮೇಶ ನಾಯಕ್, ಚಾಂದಸಾಬ್ ಕೊಟ್ಟೂರ, ವಸಂತ ಪಡಗದ, ಶರಣು ಚಿಂಚಲಿ, ಕೆ.ವಿ. ಗದುಗಿನ, ಉಡಚಪ್ಪ ಹಳ್ಳಿಕೇರಿ, ಮಂಜುನಾಥ ಮ್ಯಾಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯಾರ ಮಾತಿಗೂ ಬಗ್ಗುವುದಿಲ್ಲಬಿಜೆಪಿ ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ ಮಾತನಾಡಿ, ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ, ಗದಗ ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಬೇರೆ ಕ್ಷೇತ್ರದವರು ಬಂದು ಇಲ್ಲಿ ಶಾಸಕರಾಗಲು ನಾನು ಬಿಡುವುದಿಲ್ಲ, ಅನಿಲ ಮೆಣಸಿನಕಾಯಿ ಅವರನ್ನು ಶಾಸಕರನ್ನಾಗಿ ಮಾಡುವ ತನಕವೂ ನಾವು ವಿಶ್ರಮಿಸುವುದಿಲ್ಲ. ಯಾರ ಮಾತಿಗೂ ಬಗ್ಗುವುದಿಲ್ಲ, ಗದಗ ಕ್ಷೇತ್ರದಲ್ಲಿ ಬೇರೆಯವರು ಎಂಎಲ್ಎ ಆಗಲು ನಾನು ಬಿಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶಪಥ ಮಾಡಿದ್ದು ವಿಶೇಷವಾಗಿತ್ತು.
ಕುರ್ತಕೋಟಿಯಲ್ಲಿ ನಿರ್ಮಾಣವಾಗುವ ಭೀಮ ಮಂದಿರದಲ್ಲಿ ಪ್ರತಿ ನಿತ್ಯವೂ ಶರೀಫನವರ ತತ್ವ ಪದ, ಶ್ರೀರಾಮನ ಭಜನೆ, ಬುದ್ದನ ತತ್ವ, ಬಸವಣ್ಣನವರ ವಚನ ಸೇರಿದಂತೆ ಅನೇಕ ಸಮಾಜದಲ್ಲಿ ಸಮಾನತೆ ಮೂಡಿಸುವ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಭೀಮ ಮಂದಿರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಮನುಕುಲಕ್ಕಾಗಿ, ಸಮಾನತೆಗಾಗಿ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೇಣಸಿನಕಾಯಿ ಹೇಳಿದರು.