ಜನರ ಹೆಣದ ಮೇಲೆ ಕಾಂಗ್ರೆಸ್‌ ರಾಜಕಾರಣ: ಜೋಶಿ

KannadaprabhaNewsNetwork | Published : Apr 14, 2024 1:47 AM

ಸಾರಾಂಶ

ಬಂಧಿತ ಉಗ್ರರು ಐಎನ್‌ಡಿಐಎ (ಇಂಡಿ) ಭಾಗವಾಗಿರುವ ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳು ಅವಿತುಕೊಂಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ ಹಾರಲು ಪ್ರಯತ್ನಿಸಿದ್ದರು.

ಹುಬ್ಬಳ್ಳಿ:

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಬ್ಲಾಸ್ಟ್‌ ಆದಾಗ ಉಪಮುಖ್ಯಮಂತ್ರಿ, ಗೃಹಸಚಿವರು ಜನರ ಹಾದಿ ತಪ್ಪಿಸುವ ಕೆಲಸ ಮಾಡಿದ್ದರು. ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್‌ ಜನರ ಹೆಣದ ಮೇಲೆ ರಾಜಕಾರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಗ್ರರ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಕಾಂಗ್ರೆಸ್‌ ಇನ್ನಾದರೂ ಬಿಡಬೇಕು. ಸಿಲಿಂಡರ್‌ ಬ್ಲಾಸ್ಟ್‌, ವೃತ್ತಿ ಭಿನ್ನಾಭಿಪ್ರಾಯ ಇತ್ಯಾದಿ ಹೇಳಿಕೆ ನೀಡಿ ತನಿಖೆಯ ಹಾದಿ ತಪ್ಪಿಸಿದ್ದರು. ವೈಯಕ್ತಿಕ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದೆಲ್ಲ ಹೇಳಿದ್ದುಂಟು. ಈಗ ಆರೋಪಿಗಳನ್ನೆಲ್ಲ ಬಂಧಿಸಲಾಗಿದೆ. ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಐಎನ್‌ಡಿಐಎ (ಇಂಡಿ) ಭಾಗವಾಗಿರುವ ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳು ಅವಿತುಕೊಂಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ ಹಾರಲು ಪ್ರಯತ್ನಿಸಿದ್ದರು ಎಂದ ಅವರು, ಮುಂಬೈ ಬ್ಲಾಸ್ಟ್‌ ವೇಳೆಯಲ್ಲೂ ಬಿಜೆಪಿ ಅತೀವ ಸಂಯಮದಿಂದ ವರ್ತಿಸಿದೆ. ಆದರೆ ಕಾಂಗ್ರೆಸ್‌ ಜನರ ಜೀವ, ಹೆಣದ ಮೇಲೆ ರಾಜಕಾರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಉಗ್ರರ ಚಟುವಟಿಕೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಜ್ಯ ಸರ್ಕಾರದ ವರ್ತನೆಯಿಂದ ಇಂಥ ಘಟನೆಗಳಿಗೆ ಕುಮ್ಮಕ್ಕು ಸಿಗುತ್ತಿದೆ. ಈಗಲಾದರೂ ಮುಖ್ಯಮಂತ್ರಿಗಳು ಗುಪ್ತಚರ ಇಲಾಖೆಯನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್‌ನದು ದಯನೀಯ ಸ್ಥಿತಿ:

ಬಹುಮತಕ್ಕೆ ಎಷ್ಟು ಬೇಕೋ ಅಷ್ಟು ಸ್ಥಾನಗಳಲ್ಲೂ ಕಾಂಗ್ರೆಸ್‌ ಸ್ಪರ್ಧಿಸಿಲ್ಲ. ಬಹುಮತದ ಸರ್ಕಾರಕ್ಕೆ 272 ಸದಸ್ಯರ ಬಲ ಬೇಕು. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ ಸ್ಪರ್ಧಿಸಿದ್ದೇ 230 ಕ್ಷೇತ್ರಗಳಲ್ಲಿ. ಇಂಡಿ ಹೊರತಾಗಿ 60-70 ಸ್ಪರ್ಧಿಗಳು ಕಣದಲ್ಲಿದ್ದಾರೆ. ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ ಕಾಂಗ್ರೆಸ್ ಎಂದರು.ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ 230 ಕ್ಷೇತ್ರಗಳ ಪೈಕಿ ಹೆಚ್ಚು ಅಂದರೆ 100 ಸ್ಥಾನಗಳನ್ನು ಗೆಲ್ಲಬಹುದು. ಇದರಲ್ಲಿ ಕಾಂಗ್ರೆಸ್‌ 40 ಸ್ಥಾನ ಗೆದ್ದರೆ, ಅದರ ಬೆಂಬಲಿತ ಪಕ್ಷಗಳು 60 ಸ್ಥಾನಗಳಲ್ಲಿ ಗೆಲವು ಸಾಧಿಸಬಹುದಷ್ಟೇ ಎಂದು ಭವಿಷ್ಯ ನುಡಿದರು.

ಮಾಜಿ ಸಚಿವ ಶ್ರೀನಿವಾಸ ಪ್ರಸಾದ ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು. ಅವರು ಮೋದಿ ಕಾರ್ಯಕ್ರಮಕ್ಕೆ ಬಾರದೇ ಇರುವ ವಿಚಾರ ಗೊತ್ತಿಲ್ಲ. ಅವರು ಕಾಂಗ್ರೆಸ್‌ಗೆ ಹೋಗಲ್ಲ. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಅಪಮಾನ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಏನಾಗಿದೆ ಎಂಬುದನ್ನು ತಿಳಿದುಕೊಂಡು ಹೇಳುತ್ತೇನೆ ಎಂದರು.

Share this article