85 ವರ್ಷ ಮೇಲ್ಪಟ್ಟವರು, ವಿಕಲಚೇತನರ ಮತದಾನ ಆರಂಭವಾಗಿದೆ. ಮನೆಗೆ ತೆರಳುತ್ತಿರುವ ಚುನಾವಣಾ ಅಧಿಕಾರಿಗಳು ಹಕ್ಕು ಚಲಾಯಿಸಲು ನೆರವಾಗುತ್ತಿದ್ದಾರೆ. ಕನ್ನಡಪ್ರಭ ವಾರ್ತೆ ತುಮಕೂರುದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಏ.26 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಈ ಅವಧಿಯ ಚುನಾವಣೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಲು ಆಗದಂತಹ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವ ಕಾರ್ಯ ಆರಂಭವಾಗಿದ್ದು, ಬೆಳಗ್ಗೆ ನಗರದ ಲೇಬರ್ ಕಾಲೋನಿಯಲ್ಲಿ ಹಿರಿಯ ಮತದಾರರು ಮತದಾನ ಮಾಡಿದರು.ನಗರದ ಲೇಬರ್ ಕಾಲೋನಿಯ ನಿವಾಸಿಗಳು ಹಾಗೂ ಹಿರಿಯ ನಾಗರಿಕರರಾದ ಶಾಂತಕುಮಾರಿ ಮತ್ತು ವೆಳ್ಳಿಯಮ್ಮ ಅವರು ತಮ್ಮ ಮನೆಯಲ್ಲೇ ಮತದಾನ ಮಾಡುವ ಮೂಲಕ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಹಣೆ ಬರಹಕ್ಕೆ ಮುದ್ರೆ ಒತ್ತಿದರು. ಚುನಾವಣಾಧಿಕಾರಿಗಳು ಬೆಳಗ್ಗೆ 7 ಗಂಟೆಗೆ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರ ಮನೆಗಳಿಗೆ ಭೇಟಿ ನೀಡಿ ಮತದಾನ ಮಾಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ವಿ. ಅಶ್ವಿಜಾ ಅವರು ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮನೆಯಿಂದಲೇ ಮತದಾನ ಮಾಡವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಹೋಮ್ ವೋಟಿಂಗ್ ಆರಂಭವಾಗಿದ್ದು, ಏ.18 ರವರೆಗೆ ನಡೆಯಲಿದೆ. ಹಿರಿಯ ಮತದಾರರು ಹಾಗೂ ಶೇ.40ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಮನೆಯಿಂದಲೇ ಮತದಾನ ಮಾಡಲು ಫಾರಂ 12 ರ ಮೂಲಕ ಅವಕಾಶ ಮಾಡಿಕೊಟ್ಟಿದ್ದೆವು. ಅದರಲ್ಲಿ 43 ವಿಶೇಷ ಚೇತನ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 337 ಮತದಾರರು ಸೇರಿ ಒಟ್ಟು 380 ಮತದಾರರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ ಎಂದರು.ಬೆಳಗ್ಗೆ 7 ಗಂಟೆಗೆ ಮನೆಯಿಂದ ಮತದಾನ ಮಾಡುವ ಕಾರ್ಯ ಆರಂಭವಾಗಿದ್ದು, 4 ಅಧಿಕಾರಿಗಳ ತಂಡ 4 ರೂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಂಡ 35 ಮತದಾರರಿಂದ ಮನೆಯಿಂದಲೇ ಮತದಾನ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣಾ ಆಯೋಗದ ಈ ಕಾರ್ಯದಿಂದ ಮತಗಟ್ಟೆ ಗಳಿಗೆ ಬಂದು ಮತದಾನ ಮಾಡಲು ಸಾಧ್ಯವಾಗದವರು ಖುಷಿ ವ್ಯಕ್ತಪಡಿಸುತ್ತಾ ಮತದಾನ ಮಾಡುತ್ತಿದ್ದಾರೆ ಎಂದರು.ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, 36 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಿಲಾಗಿದೆ. ವಿಶೇಷವಾಗಿ 5 ಮಹಿಳಾ ಮತಗಟ್ಟೆಗಳು, 1 ವಿಕಲಚೇತನ ಮತಗಟ್ಟೆಗಳು, 1 ಧ್ಯೇಯ ಆಧಾರಿತ ಮತಗಟ್ಟೆಗಳು, 1 ಯುವ ಅಧಿಕಾರಿಗಳ ಮತಗಟ್ಟೆ ಹಾಗೂ 1 ಸಾಂಪ್ರದಾಯಿಕ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ------------------
ನಮಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಚುನಾವಣಾ ಆಯೋಗ ಈ ರೀತಿಯ ವ್ಯವಸ್ಥೆ ಮಾಡಿರುವುದು ನಮಗೆ ತುಂಬಾ ಖುಷಿ ತಂದಿದೆ. ಇಂದು ಅಧಿಕಾರಿಗಳು ನಮ್ಮ ಮನೆಗೆ ಬಂದು ನಾವು ಮತದಾನ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಮನೆಯಿಂದಲೇ ಮತದಾನ ಮಾಡಿರುವುದು ನಮಗೆ ತುಂಬಾ ಖುಷಿ ಕೊಟ್ಟಿದೆ.- ಶಾಂತಕುಮಾರಿ, ವೆಳ್ಳಿಯಮ್ಮ
ಮನೆಯಿಂದ ಮತ ಹಾಕಿದ ಹಿರಿಯ ನಾಗರಿಕರು