ಶಿಗ್ಗಾಂವಿ: ತಾಲೂಕಿನ ಶಿಶುನಾಳ ಗ್ರಾಮದ ಸಂತ ಶಿಶುನಾಳ ಶರೀಫರ ಗದ್ದುಗೆ ಆವರಣದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಸಂತ ಶಿಶುನಾಳ ಶರೀಫ ಹಾಗೂ ಗುರು ಗೋವಿಂದ ಭಟ್ಟರ ತೆಪ್ಪೋತ್ಸವ ಸೋಮವಾರ ಸಂಜೆ ಸಂಭ್ರಮದಿಂದ ನಡೆಯಿತು.
ಶಿಶುನಾಳ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಕೆರೆಯ ದಡದಲ್ಲಿ ಸೇರಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಭಕ್ತರು ತೆಪ್ಪದ ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ತೆಪ್ಪೋತ್ಸವದ ಅಂಗವಾಗಿ ಶರಣ ಶ್ರೀ ವೀರಭದ್ರಪ್ಪ ಶಿವರುದ್ರಣ್ಣನವರ ದಾಸೋಹ ನಿಧಿಯಿಂದ ಅನ್ನಸಂತರ್ಪಣೆ ನಡೆಯಿತು. ವಿಶ್ವನಾಥ ದಲಬಂಜನ ಅವರ ಉದಯ ಬೇಕರಿ, ಹುಬ್ಬಳ್ಳಿ ವತಿಯಿಂದ ಮಂಡಕ್ಕಿ ದಾಸೋಹ ಏರ್ಪಡಿಸಲಾಗಿತ್ತು.
ಸಮಿತಿ ಉಪಾಧ್ಯಕ್ಷ ಎಸ್.ಎಲ್. ಪಾಟೀಲ, ಕಾರ್ಯದರ್ಶಿ ಯು.ಬಿ. ಶಿರೂರ, ಮಾಜಿ ಅಧ್ಯಕ್ಷ ಎಸ್.ಜಿ. ದೇಶಪಾಂಡೆ, ಎಚ್.ವೈ. ದೊಡ್ಡಮನಿ, ಸಿ.ಎಸ್. ಬೆಟದೂರ, ಪ್ರೊ. ಐ.ಜಿ. ಸನದಿ, ಎಂ.ಬಿ. ರಜಡಿ, ವಿ.ಡಿ. ಪಾಟೀಲ, ಜಿ.ವಿ. ದೇಶಪಾಂಡೆ, ಬಿ.ಆರ್. ಮಳಲಿ, ಎಂ.ಜಿ. ರಟಗೇರಿ, ಎಸ್.ಎಸ್. ನಾಗನಗೌಡ್ರ, ಬಿ.ಡಿ. ಹಿರೇಗೌಡರ, ವಿ.ಎಂ. ಕಾಮರಡ್ಡಿ, ಎಸ್.ಬಿ. ವಾಲ್ಮೀಕಿ, ಎಂ.ಎಸ್. ಚಂದನಗೌಡ್ರ ಸೇರಿದಂತೆ ಮಠದ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ತೆಪ್ಪೋತ್ಸವ ಹಿನ್ನೆಲೆಯಲ್ಲಿ ಒಬ್ಬ ಡಿವೈಎಸ್ಪಿ, ಒಬ್ಬ ಸಿಪಿಐ, ಮೂವರು ಪಿಎಸ್‌ಐ, ಏಳು ಎಎಸ್‌ಐ, ೪೦ ಪೊಲೀಸ್ ಕಾನ್‌ಸ್ಟೆಬಲ್‌ಗಳು, ೧೦ ಗೃಹರಕ್ಷಕ ದಳದ ಸಿಬ್ಬಂದಿ, ಡಿಆರ್ ತುಕಡಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.