ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರಕಾರ ಮಹಿಳೆಯರು ಆಥಿಕವಾಗಿ ಸಬಲೀಕರಣ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ಗೃಹಲಕ್ಷ್ಮೀ ಯೋಜನೆಯನ್ನು 2023, ಜೂನ್ 6ರಂದು ಜಾರಿಗೆ ತಂದಿದೆ. ಪ್ರಾರಂಭದಲ್ಲಿ 2023ರ ಆಗಸ್ಟ್ ತಿಂಗಳಲ್ಲಿ 3,58,285 ಫಲಾನುಭವಿಗಳು ಇದ್ದರು. ಈಗ ಸೆಪ್ಟೆಂಬರ್ 2025ಕ್ಕೆ 4,11,582 ಫಲಾನುಭವಿಗಳಾಗಿದ್ದಾರೆ. ಸೆಪ್ಟಂಬರ್-2025ರ ಮಾಹೆಯ ಒಟ್ಟು ₹82.31 ಕೋಟಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮೆ ಆಗಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಗೆ 24 ಕಂತುಗಳಲ್ಲಿ ₹1901.23 ಕೋಟಿ ಅನುದಾನ ಬಿಡುಗಡೆಯಾಗಿದೆ. ಫೆಬ್ರವರಿ ಮತ್ತು ಮಾರ್ಚ್-2025ರ ಮಾಹೆಯ ಹಣ ತಾಂತ್ರಿಕ ಕಾರಣಗಳಿಂದ ಜಮೆ ಆಗಿಲ್ಲ. ಬಿಡುಗಡೆಯಾದರೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳು ಎದುರಿಸುತ್ತಿರುವ ಐಟಿ, ಜಿಎಸ್ಟಿ ಸಮಸ್ಯೆಯನ್ನು ಫಲಾನುಭವಿಗಳು ತಾವು ತೆರಿಗೆ ಪಾವತಿದಾರರು ಇಲ್ಲವೆಂಬ ಹಿಂಬರಹವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಮಾಹಿತಿ ಕಚೇರಿಗಳಿಗೆ ಸಲ್ಲಿಸಿರುತ್ತೀರಿ. ಈ ಕುರಿತು ಪ್ರಧಾನ ಕಚೇರಿಯ ಹಂತದಲ್ಲಿ ಪರಿಶೀಲನೆಗೆ ಒಳಪಡುತ್ತದೆ. ಪರಿಶೀಲನೆ ನಂತರ ಸಮಸ್ಯೆಗಳು ಬಗೆಹರಿಯಲಿವೆ. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಹಾಯವಾಣಿ ಸಂಖ್ಯೆ 181ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.