ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ವಿಚಾರದಲ್ಲಿಯೂ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ದೂರುಗಳು, ಸಲಹೆ ಸೂಚನೆಗಳು ನೀಡಿದಲ್ಲಿ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದರಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್ ಗಳನ್ನು ನಿಯೋಜಿಸುವಂತೆ ತಿಳಿಸಿದರು.
ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.ವಿಧಾನಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಗಳನ್ನು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕೈಬಿಡುವುದು ಮತ್ತು ತಿದ್ದುಪಡಿ, ವರ್ಗಾವಣೆ ಕುರಿತು ಚಾಲ್ತಿಯಲ್ಲಿರುವ ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೦, ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೧, ಮತದಾರರ ನೋಂದಣಿ ನಿಯಮಗಳು ೧೯೬೦, ಚುನಾವಣೆಗಳನ್ನು ನಡೆಸುವ ನಿಯಮಗಳು ೧೯೬೧ ಮತ್ತು ಮತದಾರರ ಪಟ್ಟಿಯ ಕೈಪಿಡಿಯನ್ವಯ ಮಾಡಲಾಗುವುದು ಎಂದು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯನ್ನು ೧ನೇ ಜನವರಿ, ೧ನೇ ಏಪ್ರಿಲ್, ೧ನೇ ಜುಲೈ ಮತ್ತು ೧ನೇ ಅಕ್ಟೋಬರ್ ಹೀಗೆ ೪ ಅರ್ಹತಾ ದಿನಾಂಕವಾಗಿಟ್ಟುಕೊಂಡು ನಡೆಸಲಾಗುವುದು ಎಂದು ತಿಳಿಸಲಾಯಿತು. ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ: ೦೬/೦೧/೨೦೨೫ ರಂದು ಪ್ರಕಟಿಸಲಾಗಿದೆ, ಅಂತಿಮ ಮತದಾರರ ಪಟ್ಟಿಯಂತೆ ಪುರುಷರು ೭,೬೩,೬೭೬ ಹಾಗೂ ಮಹಿಳೆಯರು ೭,೭೪,೧೭೫ ಮತ್ತು ಇತರರು ೩೭ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೫,೩೭,೮೮೮ ಈ ಕೆಳಕಂಡಂತೆ ಮತದಾರರಿದ್ದಾರೆ ಎಂದರು.
ನಮೂನೆ-೬, ೬ಎ, ೭ ಮತ್ತು ೮ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆ್ಯಪ್ (ಗಿಔಖಿಇಖ ಊಇಐPಐIಓಇ ಂಠಿಠಿ)ಅನ್ನು ಬಳಸಬಹುದು.
ನಗರ ಪ್ರದೇಶದಲ್ಲಿ ಹೆಚ್ಚಿನ ಜನ ಸಂದಣಿಯಾಗದೇ ಗುಂಪು ಮತಗಟ್ಟೆಗಳನ್ನು ವಿಂಗಡಿಸಲಾಗಿದ್ದು, ಮತದಾನ ಪ್ರಕ್ರಿಯೆಗೆ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು, ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಚುನಾವಣೆ ತಹಸೀಲ್ದಾರ್ ಪಿ.ಎಸ್ ಕುಂಬಾರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.