Students from the Keladi Shivappa Nayaka University of Agricultural and Horticultural Sciences in Navule staged a protest march on Tuesday, braving the rain, to oppose the decision to allow graduates from other disciplines to apply for the posts of Agricultural Officer and Assistant Agricultural Officer
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಅನ್ಯ ಪದವೀಧರರಿಗೆ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ, ನವುಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರ ಮಳೆಯ ನಡುವೆಯೂ ಪ್ರತಿಭಟನಾ ಮೆರವಣಿಗೆ ನಡೆಸಿದರು.ವಿಶ್ವವಿದ್ಯಾಲಯ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಅತ್ಯಂತ ತಾಂತ್ರಿಕ ಸ್ವರೂಪದ್ದಾಗಿದ್ದು, ರೈತರಿಗೆ ವೈಜ್ಞಾನಿಕ ಕೃಷಿ ಸಲಹೆ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ ಕಾಪಾಡುವುದು, ಕೀಟ ಹಾಗೂ ರೋಗ ನಿಯಂತ್ರಣ, ರಸಗೊಬ್ಬರ ಮತ್ತು ಬೀಜಗಳ ಗುಣಮಟ್ಟದ ಮೇಲ್ವಿಚಾರಣೆ ಸೇರಿದಂತೆ ಮಹತ್ವದ ಜವಾಬ್ದಾರಿಗಳನ್ನು ಹೊಂದಿವೆ. ಆದ್ದರಿಂದ ಐಸಿಎಆರ್ ಮಾನ್ಯತೆ ಪಡೆದ ಕೃಷಿ ಹಾಗೂ ಕೃಷಿ ಸಂಬಂಧಿತ ಪದವೀಧರರಿಗೆ ಮಾತ್ರ ಈ ಹುದ್ದೆಗಳಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಈ ಕುರಿತು ಹಲವು ಬಾರಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟ ಹೋರಾಟ ಆರಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಈ ಹೋರಾಟವು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧವಲ್ಲ. ರೈತರ ಹಿತಾಸಕ್ತಿ, ಕೃಷಿ ಶಿಕ್ಷಣದ ಘನತೆ, ಕೃಷಿ ಇಲಾಖೆಯ ವೃತ್ತಿಪರತೆ ಹಾಗೂ ಸಾವಿರಾರು ಕೃಷಿ ಪದವೀಧರರ ನ್ಯಾಯಸಮ್ಮತ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಮಧ್ಯಪ್ರವೇಶಿಸಿ, ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕೃಷಿ ವಿದ್ಯಾರ್ಥಿಗಳು ಹಾಗೂ ರೈತ ಸಮುದಾಯದಲ್ಲಿರುವ ಆತಂಕವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಾದ ಗುರುರಾಜ್, ಪವನ್ ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.---------------------
ಪೋಟೋ: 04ಎಸ್‌ಎಂಜಿಕೆಪಿ09