ಕನ್ನಡ ಭಾಷೆಗೆ ಈಗ ಅನೇಕ ಸಮಸ್ಯೆ, ಸವಾಲು: ಸಾಹಿತಿ ಪಳನಿಸ್ವಾಮಿ ಜಾಗೇರಿ

KannadaprabhaNewsNetwork | Published : Nov 28, 2024 12:35 AM

ಸಾರಾಂಶ

ಕನ್ನಡ ಭಾಷೆ ಈಗ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ ಎಂದು ಸಾಹಿತಿ ಪಳನಿಸ್ವಾಮಿ ಜಾಗೇರಿ ಕಳವಳ ವ್ಯಕ್ತಪಡಿಸಿದರು. ಕೊಳ್ಳೇಗಾಲದಲ್ಲಿ ಕನ್ನಡ ಮಅಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಮಾಸಾಚರಣೆ 2024 ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕನ್ನಡ ಭಾಷೆ ಈಗ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ ಎಂದು ಸಾಹಿತಿ ಪಳನಿಸ್ವಾಮಿ ಜಾಗೇರಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಕಾಮಗೆರೆಯ ಸಂತ ಕ್ಸೇವಿಯರ್ ಪ್ರೌಢಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ಕನ್ನಡ ಮಾಸಾಚರಣೆ 2024 ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.

ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುವ ಅಪಾಯವಿರುತ್ತದೆ ಎಂದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅನೇಕ ದಾರ್ಶನಿಕರು, ಕವಿಗಳು, ಸಾಹಿತಿಗಳು ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿರುವುದು ವಿಷಾದನೀಯ. ಆಂಗ್ಲ ಭಾಷೆ ಕೇವಲ ವ್ಯವಹಾರಿಕವಾಗಿ ಮಾತ್ರ ಇರಲಿ. ಆದರೆ, ಮಾತೃಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕಾಗಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಆಕರ್ಷಿತರಾಗಿ ನಾಡು-ನುಡಿಯ ರಕ್ಷಣೆಗೆ ಮುಂದಾಗಬೇಕು. ಶಾಲೆಗಳಲ್ಲಿ ನಾಡು-ನುಡಿ, ಸಾಹಿತ್ಯದ ಬಗ್ಗೆ ಜಾಗೃತಿಯನ್ನುಂಟು ಮಾಡುವ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ‍್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಬಿ ಪ್ರತಿಷ್ಠಾನದ ಎಸ್. ಶಶಿಕುಮಾರ ಮಾತನಾಡಿ, ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಳ್ಳುವತ್ತ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ನಾವಿಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಅಂತೋಣಿ ರಾಜ, ಸಹ ಶಿಕ್ಷಕರಾದ ಕುಮಾರಿ, ಲಿಡಿಯಾ, ಮೇಘನ ಪ್ರಿಯಾ, ರೇಷ್ಮಾ, ರೋಶನ್, ನವೀನ ಕುಮಾರ, ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳಿದ್ದರು.

Share this article