ನಿಗಮ ಮಂಡಳಿ ಇಂದು ಪ್ರಕಟ?

KannadaprabhaNewsNetwork | Updated : Jan 17 2024, 12:48 PM IST

ಸಾರಾಂಶ

ಬಹು ನಿರೀಕ್ಷಿತ ನಿಗಮ-ಮಂಡಳಿಗಳ ನೇಮಕಾತಿಗೆ ಕಡೆಗೂ ಮಹೂರ್ತ ನಿಗದಿಯಾಗಿದ್ದು, ಹೈಕಮಾಂಡ್‌ನಿಂದ ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಪಟ್ಟಿ ಬುಧವಾರ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹು ನಿರೀಕ್ಷಿತ ನಿಗಮ-ಮಂಡಳಿಗಳ ನೇಮಕಾತಿಗೆ ಕಡೆಗೂ ಮಹೂರ್ತ ನಿಗದಿಯಾಗಿದ್ದು, ಹೈಕಮಾಂಡ್‌ನಿಂದ ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಪಟ್ಟಿ ಬುಧವಾರ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಒಟ್ಟು 60 ಹುದ್ದೆಗೆ ಹೆಸರು ಅಂತಿಮಗೊಂಡಿದೆ. ಬುಧವಾರ 36 ಶಾಸಕರು ಹಾಗೂ 10 ಕಾರ್ಯಕರ್ತರು ಸೇರಿ 46 ಮಂದಿಯ ಹೆಸರು ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕುತೂಹಲಕಾರಿ ಸಂಗತಿಯೆಂದರೆ, ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಎನ್‌.ಎ. ಹ್ಯಾರೀಸ್‌, ಸಂಗಮೇಶ್‌, ಬೇಳೂರು ಗೋಪಾಲಕೃಷ್ಣ, ವಿಜಯಾನಂದ ಕಾಶಪ್ಪನವರ್‌ ಅವರು ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇವರಲ್ಲದೆ, ಎಂ.ರೂಪಕಲಾ, ಸತೀಶ್‌ ಸೈಲ್‌, ಅನಿಲ್‌ ಚಿಕ್ಕಮಾದು, ಶರತ್‌ ಬಚ್ಚೇಗೌಡ, ಎಂ.ಬಿ.ರಾಜೇಗೌಡ, ಎ.ಬಿ. ರಮೇಶ್‌ ಅವರು ಅವಕಾಶ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕುತೂಹಲಕಾರಿ ಬೆಳವಣಿಗೆಯಂದರೆ, ಮಾಜಿ ವಿಧಾನಪರಿಷತ್‌ ಸದಸ್ಯ ಸರೋವರ ಶ್ರೀನಿವಾಸ್ ಹಾಗೂ ಸುಧೀಂದ್ರ ಅವರಿಗೆ ಕಾರ್ಯಕರ್ತರ ಕೋಟಾದಲ್ಲಿ ಹುದ್ದೆ ಸಿಗಲಿದೆ ಎಂದು ಹೇಳಲಾಗಿದೆ.ಬುಧವಾರ ಮಧ್ಯಾಹ್ನದ ನಂತರ ಪಟ್ಟಿ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ.

ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ಸ್ಥಾನ ನೀಡಬೇಕೆಂಬ ಒಂದು ವಾದ, ಇಲ್ಲ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೂ ಅವಕಾಶ ನೀಡಬೇಕೆಂಬ ಮತ್ತೊಂದು ವಾದದ ಹಿನ್ನೆಲೆಯಲ್ಲಿ ಪಟ್ಟಿ ಹೊರಬೀಳುವುದು ತಡವಾಗಿತ್ತು. 

ಬಳಿಕ ಪಕ್ಷ ಸ್ಪಷ್ಟ ನಿರ್ಧಾರ ತೆಗೆದುಕೊಂಡ ಬಳಿಕ ಇದೀಗ ಅಂತಿಮ ಪಟ್ಟಿ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದೆ.ರಾಜ್ಯ ನಾಯಕತ್ವ ಸಿದ್ದಪಡಿಸಿರುವ ಹಾಗೂ ಹೈಕಮಾಂಡ್‌ ಒಪ್ಪಿಗೆ ನೀಡಿರುವ ಪಟ್ಟಿಯಲ್ಲಿ ಕೇವಲ ಮೂರು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ ವಿಧಾನಪರಿಷತ್‌ ಸದಸ್ಯರಿಗೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Share this article