- ರಾಜ್ಯದ ಜನತೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ ಬಹಿರಂಗ ಕ್ಷಮೆಯಾಚಿಸಬೇಕು: ಅಫ್ಸರ್ ಆಗ್ರಹ
- ಎಸ್‌ಡಿಪಿಐನಿಂದ ಬೆಂಗಳೂರಿನಲ್ಲಿ ಆ.19ರಂದು ವಿಧಾನಸೌಧ ಚಲೋ ಹೋರಾಟ
- ಗೃಹಜ್ಯೋತಿಗೆ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ಜಾತಿ ಪ್ರಮಾಣ, ಪಾನ್ ಕಾರ್ಡ್ ಕೇಳೋದು ಅವೈಜ್ಞಾನಿಕ ಕ್ರಮ- - -
ಜನತೆ ಕೇಳದಿದ್ದರೂ ರಾಜ್ಯದಲ್ಲಿ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳಿಗೆ ವಾರಂಟಿಯೇ ಇಲ್ಲದಂತಾಗಿದೆ. ಗ್ಯಾರಂಟಿಗಳ ಜಾರಿಗೆ ಹಣವೇ ಇಲ್ಲದ ಕಾಂಗ್ರೆಸ್ ಸರ್ಕಾರವು ಯೋಜನೆಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ವೈಫಲ್ಯ ಹಾಗೂ ಅನಗತ್ಯ ನಿರ್ಬಂಧಗಳನ್ನು ಹೇರುವ ಮೂಲಕ ರಾಜ್ಯದ ಜನರನ್ನು ಸಂಕಷ್ಟಕ್ಕೆ ನೂಕುತ್ತಿವೆ ಎಂದು ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ದೂರಿದ್ದಾರೆ.
ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಗೆ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರಗಳ ಜೊತೆಗೆ ಜಾತಿ ಪ್ರಮಾಣ, ಪಾನ್ ಕಾರ್ಡ್‌ಗಳನ್ನೆಲ್ಲಾ ಕೇಳುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ ನಂತರ ಯಾವ ಕಾರಣಕ್ಕೆ ಈಗ ಪಾನ್ ಕಾರ್ಡ್ ನೀಡಬೇಕು ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ. ಜಾತಿ ಪ್ರಮಾಣಪತ್ರ ಕೇಳುವ ಮೂಲಕ ಜಾತಿಗಳನ್ನು ತೋರಿಸುವ ಕೆಲಸವಾಗುತ್ತಿದೆ. ಎಲ್ಲರಿಗೂ ಉಚಿತ ವಿದ್ಯುತ್ ಘೋಷಿಸಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಕೇರಳದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ವಾರ್ಷಿಕ ಕುಟುಂಬ ಆದಾಯ ಮಿತಿಯನ್ನು ₹1 ಲಕ್ಷ, ತೆಲಂಗಾಣದ ಗ್ರಾಮೀಣ ಪ್ರದೇಶಗಳಿಗೆ ₹2 ಲಕ್ಷ ಹಾಗೂ ನಗರ ಪ್ರದೇಶಗಳಿಗೆ ₹3 ಲಕ್ಷಕ್ಕೆ ಆದಾಯ ಮಿತಿ ಅನುಸರಿಸಲಾಗುತ್ತಿದೆ. ಆದರೆ, ನಮ್ಮ ಕರ್ನಾಟಕದಲ್ಲಿ ಮಾತ್ರ ₹32 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಸಾವಿರಾರು ಅರ್ಹ ಫಲಾನುಭವಿಗಳನ್ನು ಸರ್ಕಾರದ ಯೋಜನೆ, ಸೌಲಭ್ಯಗಳಿಂತ ವಂಚಿಸುವ ಪ್ರಯತ್ನ ಇದಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದರು.
₹130 ಕೋಟಿ ಖರ್ಚು ಮಾಡಿ, ಜಾತಿಗಣತಿ ಕೈಗೊಂಡ ಸರ್ಕಾರ ಅದನ್ನು ಅಂಗೀಕರಿಸಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಈಗ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸುತ್ತಿದ್ದು, 2 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಸಮಾನ ಹಕ್ಕುಗಳ ಆಯೋಗ ರಚನೆ, ಜಾತಿ ಜನಗಣತಿ ವರದಿ ಬಿಡುಗಡೆ, 2ಬಿ ಮೀಸಲಾತಿ ಮರುಜಾರಿಗೆ ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧ ಚಲೋ ಹೋರಾಟವನ್ನು ಆ.19ರಂದು ಎಸ್‌ಡಿಪಿಐನಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು.
- - -
- ಅಫ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ಮುಖಂಡ.
- - --10ಕೆಡಿವಿಜಿ1: ದಾವಣಗೆರೆಯಲ್ಲಿ ಸೋಮವಾರ ಎಸ್‌ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.