ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮ ಪಂಚಾಯಿತಿಗಿಲ್ಲ ಅಧಿಕಾರಿಗಳು

KannadaprabhaNewsNetwork |  
Published : Jun 18, 2025, 02:17 AM ISTUpdated : Jun 18, 2025, 02:18 AM IST
ಫೋಟೊ ಶೀರ್ಷಿಕೆ: 17ಆರ್‌ಎನ್‌ಆರ್2ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮಪಂಚಾಯತ್ ಕಚೇರಿ  | Kannada Prabha

ಸಾರಾಂಶ

ಗ್ರಾಮದಲ್ಲಿ ಮಳೆಯಾದರೆ ಸಾಕು, ಕಾಲುವೆಗಳು ತುಂಬಿ ರಸ್ತೆಗೆ ಹರಿಯುವ ಕೊಳಚೆ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರು ಪರದಾಡುವಂತಾಗುತ್ತದೆ. ಆದರೂ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳೇ ಇಲ್ಲ.

ಬಸವರಾಜ ಸರೂರ

ರಾಣಿಬೆನ್ನೂರು: ತಾಲೂಕಿನ ಅತಿ ದೊಡ್ಡದು ಎನಿಸಿರುವ ಮೆಡ್ಲೇರಿ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿಗಳು ಇಲ್ಲದೆ ಜನರು ನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಪಂಚಾಯಿತಿಗೆ ಅಲೆದಾಡುವಂತಾಗಿದೆ. ಗ್ರಾಮದಲ್ಲಿ ಮಳೆಯಾದರೆ ಸಾಕು, ಕಾಲುವೆಗಳು ತುಂಬಿ ರಸ್ತೆಗೆ ಹರಿಯುವ ಕೊಳಚೆ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರು ಪರದಾಡುವಂತಾಗುತ್ತದೆ. ಆದರೂ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳೇ ಇಲ್ಲ.

ಸಮಸ್ಯೆಗಳ ಸರಮಾಲೆ: ವಾರಗಟ್ಟಲೆ ಆದರೂ ಕುಡಿಯುವ ನೀರು ಬರುವುದಿಲ್ಲ. ಬೀದಿದೀಪಗಳು ಇಲ್ಲದೆ ಜನರು ಕತ್ತಲೆಯಲ್ಲಿ ಓಡಾಡುವಂತಾಗುತ್ತದೆ. ಸಮಪರ್ಕವಾಗಿ ಕಸ ವಿಲೇವಾರಿ ಮಾಡದಿರುವುದರಿಂದ ಗ್ರಾಮವು ಗಬ್ಬು ನಾರುವಂತಾಗಿದೆ. ಕಚೇರಿ ಕೆಲಸಗಳಿಗೆ ಇ- ಸ್ವತ್ತು ಉತಾರ ಬೇಕೆಂದು ಹೋದರೆ ಪಂಚಾಯಿತಿಯಲ್ಲಿ ಅಗತ್ಯ ಸಿಬ್ಬಂದಿಯಿರದ ಕಾರಣ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸುಮಾರು 20 ಸಾವಿರ ಜನಸಂಖ್ಯೆಯುಳ್ಳ ಗ್ರಾಮ ಪಂಚಾಯಿತಿಯಲ್ಲಿ 25 ಸದಸ್ಯರಿದ್ದಾರೆ. ಆದರೆ ಸುಗಮ ಆಡಳಿತ ವ್ಯವಸ್ಥೆ ನಿಭಾಯಿಸಲು ಇಲ್ಲಿ ಯಾವುದೇ ಜವಾಬ್ದಾರಿಯುತ ಆಡಳಿತಾಧಿಕಾರಿಗಳು ಇಲ್ಲದಿರುವುದು ಈ ಎಲ್ಲ ಅವ್ಯವಸ್ಥೆಗೆ ಕಾರಣವಾಗಿದೆ.ತಾಲೂಕಿನಲ್ಲಿ ಮೆಡ್ಲೇರಿ ಗ್ರಾಮ ಪಂಚಾಯಿತಿ ಒಂದಲ್ಲ ಒಂದು ರೀತಿಯಲ್ಲಿ ನಿರ್ಲಕ್ಷ್ಯ ಧೋರಣೆಗೆ ಒಳಗಾಗುತ್ತಲೇ ಬಂದಿದ್ದು, ಕಳೆದ ಎರಡು ವರ್ಷಗಳಿಂದ ಈ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಖಾಲಿ ಬಿದ್ದಿವೆ. ಇಲ್ಲಿನ ಸದಸ್ಯರು ಈ ಬಗ್ಗೆ ತಾಲೂಕು ಪಂಚಾಯಿತಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಶಾಸಕರ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಭರ್ತಿ ಮಾಡದೇ ಇರುವುದು ಆಡಳಿತ ಮಂಡಳಿಗೆ ಗ್ರಾಮದ ಬಗೆಗಿನ ನಿಷ್ಕಾಳಜಿಯನ್ನು ತೋರುತ್ತದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಇದೀಗ ಪಿಡಿಒ ಸಹ ಇಲ್ಲದೆ ಇರುವುದರಿಂದ ಮೆಡ್ಲೇರಿ ಗ್ರಾಮ ಪಂಚಾಯಿತಿಗೆ ದಿಕ್ಕು ದೆಸೆಯಿಲ್ಲದಂತಾಗಿದೆ ಎಂದು ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರ ಆರೋಪವಾಗಿದೆ.

ಸಿಬ್ಬಂದಿ ಸಬೂಬು: ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡುವ ಎಂದರೆ ಅವರು ಫೋನ್ ಕರೆಗೆ ಸಿಗುವುದಿಲ್ಲ. ಇನ್ನು ತಾಲೂಕು ಪಂಚಾಯಿತಿಗೆ ಹೋಗಿ ಸ್ವತಃ ಇಒ ಅವರಿಗೆ ಗ್ರಾಮದ ಸಮಸ್ಯೆ ಬಗ್ಗೆ ಹೇಳುವ ಎಂದರೆ ಅಲ್ಲೂ ಕೈಗೆ ಸಿಗದೇ ಆ ಮೀಟಿಂಗ್ ಹೋಗಿದ್ದಾರೆ, ಈ ಮೀಟಿಂಗ್ ಹೋಗಿದ್ದಾರೆ ಎಂದು ಅವರ ಸಿಬ್ಬಂದಿ ಸಬೂಬು ಹೇಳುತ್ತಾರೆ. ಇದರಿಂದಾಗಿ ಗ್ರಾಮದ ಅವ್ಯವಸ್ಥೆ ಬಗ್ಗೆ ಯಾರಿಗೆ ದೂರು ನೀಡುವುದು ಎನ್ನುವಂತಾಗಿದೆ. ಎರಡು ವರ್ಷಗಳಿಂದ ಇಲ್ಲಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಸಹಾಯಕರಿಲ್ಲ. ಇದರ ಬಗ್ಗೆ ಜಿಪಂ ಮತ್ತು ತಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಸದಸ್ಯರಾದ ಶೋಭಾ ಹುಲ್ಲತ್ತಿ, ಪ್ರಕಾಶ ಬಿಂಗೇರ ತಿಳಿಸಿದರು.

ಸಹಕಾರ ಅಗತ್ಯ: ಯಾವುದೇ ಅಧಿಕಾರಿಗೆ ಆಗಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರವಿದ್ದರೆ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಮಾಲತೇಶ ಮಡಿವಾಳರ ಎಂಬುವರನ್ನು ಅಲ್ಲಿಗೆ ಪಿಡಿಒ ಆಗಿ ನಿಯೋಜನೆ ಮಾಡಿದ್ದೇವೆ. ಆದಷ್ಟು ಶೀಘ್ರ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಾಪಂ ಇಒ ಪರಮೇಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ