ಶಿವಾನಂದ ಅಂಗಡಿ
ಮುಂಗಾರಿಗೆ ಹೆಸರುಕಾಳು, ಗೋವಿನಜೋಳ, ಸೋಯಾಬಿನ್, ಹತ್ತಿ, ಗೆಜ್ಜೆಶೇಂಗಾ, ಮಸಾರಿ ನೆಲದಲ್ಲಿ ಹಬ್ಬು ಶೇಂಗಾ ಬಿತ್ತನೆ ಕಾರ್ಯ ಈಗ ಜೋರಾಗಿ ನಡೆಯುತ್ತಿದ್ದು, ಗದಗ-ಹುಬ್ಬಳ್ಳಿ, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀವು ನೂರಾರು ಕಿಲೋ ಮೀಟರ್ ಸಾಗಿದರೆ ಎತ್ತುಗಳಿಂದ ಬಿತ್ತನೆ ಮಾಡುವವರೇ ಕಾಣುವುದಿಲ್ಲ. ಅಷ್ಟರ ಮಟ್ಟಿಗೆ ಹೊಲಗಳಲ್ಲಿ ಟ್ರ್ಯಾಕ್ಟರ್‌ಗಳ ಸದ್ದು ಹೆಚ್ಚಾಗಿದೆ. ಹೀಗಾಗಿ ಧಾರವಾಡ ಆಕಾಶವಾಣಿಯಲ್ಲಿ ಪ್ರತಿದಿನ ಸಂಜೆ ಕೃಷಿ ರಂಗದಲ್ಲಿ ಪ್ರಸಾರವಾಗುತ್ತಿದ್ದ ಹಾ... ಮಹಾಲಿಂಗ, ಮಹಾಲಿಂಗ, ಮಹಾಲಿಂಗ ಹಾಡು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ನಾಡಿನೆಲ್ಲೆಡೆ ಪ್ರಸಿದ್ಧವಾಗಿದ್ದ ಕೃಷಿ ರಂಗ ಕಾರ್ಯಕ್ರಮದಲ್ಲಿ ಕೃಷಿ ಸಲಹೆಗಳು, ಬೀಜ, ಗೊಬ್ಬರ, ಕೀಟಬಾಧೆ ನಿಯಂತ್ರಣ ಸಲಹೆಗಳು ಕಾರ್ಯಕ್ರಮದಲ್ಲಿ ಮೂಡಿಬರುತ್ತಿದ್ದವು.
ಎತ್ತುಗಳ ಜಾಗದಲ್ಲಿ ಟ್ರ್ಯಾಕ್ಟರ್: ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಬಹುಜನರ ಉದ್ಯೋಗ ಕೃಷಿಯೇ ಆಗಿತ್ತು. ಅತಿವೃಷ್ಟಿ, ಅನಾವೃಷ್ಟಿ, ಅವೈಜ್ಞಾನಿಕ ಕೃಷಿ ವಿಧಾನಗಳಿಂದ ಬಹುತೇಕ ಸಂಖ್ಯಾತ ರೈತರು ಕೃಷಿಯಿಂದ ಲಕ್ಷಾಂತರ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇತ್ತೀಚಿನ ಹೊಸಮನೆಗಳಲ್ಲಿ ಎತ್ತುಗಳ ಶೆಡ್, ಗೊದಲಿಯೇ ಮಾಯವಾಗಿದ್ದು, ಮನೆಯ ಹಿತ್ತಲಿನ ಶೆಡ್‌ಗಳಿಗೆ ಟ್ರ್ಯಾಕ್ಟರ್‌ಗಳು ಬಂದು ನಿಂತಿವೆ.ಮೇಲಾಗಿ ನೇಗಿಲು, ರಂಟಿ, ಬೆಳೆಸಾಲು, ಬಿತ್ತನೆ ಕುರಗಿ ಸಕಲವೂ ಯಂತ್ರಮಯವಾಗಿರುವುದರಿಂದ ಎತ್ತುಗಳನ್ನು ಸಾಕಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಎತ್ತುಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ.
ಹಳ್ಳಿ ಹಳ್ಳಿಗಳೂ ಸೇರಿ ಅಣ್ಣಿಗೇರಿ, ನವಲಗುಂದ, ನರಗುಂದ, ಸವದತ್ತಿಯಂಥ ನೀರಾವರಿ ಪ್ರದೇಶಗಳಲ್ಲಿ ಈಗ ಟ್ರ್ಯಾಕ್ಟರ್‌ಗಳ ಸದ್ದೇ ಹೆಚ್ಚಾಗಿದ್ದು, ಹುಬ್ಬಳ್ಳಿ-ವಿಜಯಪುರ ಮಾರ್ಗವಾಗಿ ನರಗುಂದ, ನವಲಗುಂದ ಪ್ರವೇಶಿಸಿದರೆ ಸಾಕು ರಸ್ತೆಯಲ್ಲೇ ನಿಮಗೆ ಸ್ವಾಗತಿಸುವುದೇ ಟ್ರ್ಯಾಕ್ಟರ್. ಅಷ್ಟರ ಮಟ್ಟಿಗೆ ಈಗ ಟ್ರ್ಯಾಕ್ಟರ್ ರೈತ ಮಿತ್ರವಾಗಿದೆ.
ಸಣ್ಣ ಹಿಡುವಳಿದಾರರು ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ. ಜತೆಗೆ ಬ್ಯಾಂಕ್‌ಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಸಹ ರೈತರಿಗೆ ಟ್ರ್ಯಾಕ್ಟರ್‌ಸಾಲ ನೀಡುತ್ತಿದ್ದು, ಖರೀದಿಗೆ ರೈತರಿಗೆ ಪ್ರೇರಣಿಯಾಗುತ್ತಿದೆ.
ಟ್ರ್ಯಾಕ್ಟರ್ ಬಂದ ಮೇಲೂ ನಾವು ಎತ್ತುಗಳನ್ನು ಉಳಿಸಿಕೊಂಡಿದ್ದೇವೆ. ಸಗಣಿ ಗೊಬ್ಬರ ಸೇರಿದಂತೆ ಎಡೆ ಹೊಡೆಯಲು ಎತ್ತುಗಳ ಬೇಕೆ ಬೇಕು, ಕಳೆದ ಶಿವರಾತ್ರಿಗಷ್ಟೇ ರು. 1.50 ಲಕ್ಷ ನೀಡಿ ಎತ್ತುಗಳನ್ನು ತಂದಿದ್ದೇವೆ. ಈಗ ಅವುಗಳ ಬೆಲೆ 2 ಲಕ್ಷ ರು. ದಾಟಿದೆ ಎನ್ನುತ್ತಾರೆ ಪ್ರಗತಿಪರ ರೈತ ಹನುಮರಡ್ಡಿ ಚಾಕಲಬ್ಬಿ.