ಗದಗ: ಹುಟ್ಟಿನಿಂದ ಸಾವಿನ ವರೆಗೂ ಕಾನೂನು ಬೇಕೇ ಬೇಕು. ಜನನದ ದಾಖಲೆಗೂ ಮರಣದ ದಾಖಲೆಗೂ ಕಾನೂನು ತುಂಬಾ ಅವಶ್ಯಕ. ಧರ್ಮದ ತಳಹದಿಯ ಮೇಲೆ ಕಾನೂನು ನಿಂತಿದ್ದು, ಕಾನೂನು ಬಿಟ್ಟು ಧರ್ಮ ಸಂಸ್ಕಾರಗಳು ಇಲ್ಲ ಎಂದು ಜಿಲ್ಲಾ ವಿಶ್ರಾಂತ ನ್ಯಾಯಾಧೀಶ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ಹೇಳಿದರು.
ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಮಾತನಾಡಿ, ಇತ್ತೀಚೆಗೆ ನಿಧನರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹಾಗೂ ಖ್ಯಾತ ಹಾಸ್ಯ ನಟ ಎಂ.ಎಸ್. ಉಮೇಶ್ ಅವರು ನಡೆದು ಬಂದ ದಾರಿಯನ್ನು ಅವಲೋಕಿಸಿ, ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ ಮಕ್ಕಳಿಲ್ಲದ ತಿಮ್ಮಕ್ಕ ಗಿಡಮರಗಳನ್ನೇ ತನ್ನ ಮಕ್ಕಳೆಂದು ಸಾಕಿದರು. ಅವರ ಹೆಸರಿನಲ್ಲಿ ರಾಜ್ಯ, ರಾಷ್ಟ್ರದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಕೂಡ ಪರಿಸರ ಸಂಘಟನೆಗಳು ಉದ್ಯಾನಗಳು ಇರುವುದು ಕರ್ನಾಟಕದ ಹೆಮ್ಮೆ ಎಂದರು.
ಶ್ರೀಮಠದ ಧರ್ಮದರ್ಶಿ ಶ್ರೀ ಮಹೇಶ್ವರ ಸ್ವಾಮಿ ಹೊಸಳ್ಳಿಮಠ ಆಶೀರ್ವಚನ ನೀಡಿ, ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕಾಗಿದ್ದು ತುಂಬಾ ಅತ್ಯಗತ್ಯವಾಗಿದೆ, ಅದರ ಉಪಯುಕ್ತತೆಯನ್ನು ತಿಳಿದುಕೊಳ್ಳಬೇಕಾಗಿರುವುದು ಇಂದಿನ ತುರ್ತು ಆಗಿದೆ ಎಂದರು.ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ ಇತ್ತೀಚಿಗೆ ಆಯ್ಕೆಯಾದ ಶರಣಬಸಪ್ಪ ಗುಡಿಮನಿ, ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ ಹಾಗೂ 80 ವಸಂತಗಳನ್ನು ಪೂರೈಸಿದ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಅವರನ್ನು ಸನ್ಮಾನಿಸಲಾಯಿತು.
ಡಾ. ರಾಜೇಶ್ ಭದ್ರಶೆಟ್ಟಿ, ನೀಲಮ್ಮ ಜವಳಿ, ಪ್ರೊ. ಕೆ.ಎಚ್. ಬೇಲೂರು, ಬಿ.ಎಂ. ಬಿಳೆಯಲಿ, ನಿಂಗಪ್ಪ ಬಳಿಗಾರ, ವೀರೇಶ್ವರಸ್ವಾಮಿ ಹೊಸಳ್ಳಿಮಠ ಇದ್ದರು. ಸಿದ್ದಣ್ಣ ಜವಳಿ ಪ್ರಾರ್ಥಿಸಿದರು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು. ಕುಂದ್ರಾಳ್ ಹಿರೇಮಠ ಎಂ.ವಿ. ಕಾರ್ಯಕ್ರಮ ನಿರೂಪಿಸಿದರು. ಚೆನ್ನಯ್ಯ ಹಿರೇಮಠ ವಂದಿಸಿದರು.