ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ, ಆಹಾರ ಸುರಕ್ಷತೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಆಹಾರ ಕೊರತೆಯನ್ನು ಎದುರಿಸುತ್ತಿದ್ದ ಭಾರತ ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಬೇರೆ ದೇಶಗಳಿಗೆ ಆಹಾರ ರಫ್ತು ಮಾಡುವಷ್ಟು ಸಮರ್ಥವಾಗಿದೆ. ಇದಕ್ಕೆ ರೈತರ ಶ್ರಮವೇ ಕಾರಣ ಎಂದು ಬಣ್ಣಿಸಿದರು.ದೇಶದಲ್ಲಿ ಇಂದು ಆಹಾರದ ಕೊರತೆ ಇಲ್ಲ. ಆದರೂ ಕೆಲವರಿಗೆ ಇಂದಿಗೂ ಆಹಾರ ಸಿಗುತ್ತಿಲ್ಲ. ಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಸಿಗಬೇಕೆಂಬ ದೂರದೃಷ್ಟಿಯಿಂದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದರು ಎಂದು ವಿವರಿಸಿದರು.
ಅಂದಿನಿಂದ ಬಡತನದ ರೇಖೆಯಲ್ಲಿರುವ ಪ್ರತಿ ವ್ಯಕ್ತಿಗೆ ತಲಾ ೫ ಕೆ.ಜಿ. ಅಕ್ಕಿಯನ್ನು ವಿತರಿಸುವ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಹ ೫ ಕೆ.ಜಿ. ಅಕ್ಕಿ ಸಾಲದೆಂಬ ಕಾರಣಕ್ಕೆ ಅದನ್ನು ೭ ಕೆಜಿಗೆ ಹೆಚ್ಚಿಸಿದರು. ನಂತರ ಬಂದ ಸರ್ಕಾರ ಅದನ್ನು ಸ್ಧಗಿತಗೊಳಿಸಿತ್ತು ಎಂದು ಬೇಸರ ವ್ಯಕ್ತಪಡಿಸಿದರು.ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ೫ ಕೆಜಿ ಅಕ್ಕಿಯ ಜೊತೆಗೆ ಇನ್ನೂ ೫ ಕೆಜಿ ಸೇರಿಸಿ ಒಟ್ಟು ೧೦ ಕೆಜಿ ಅಕ್ಕಿ ನೀಡಲು ಯೋಜನೆ ರೂಪಿಸಿದ್ದೆವು. ಕೇಂದ್ರ ಸರ್ಕಾರದ ಸಹಕಾರ ಸರಿಯಾಗಿ ಸಿಗದ ಕಾರಣ ೫ ಕೆಜಿ ಅಕ್ಕಿಯ ಜೊತೆಗೆ ೫ ಕೆಜಿ ಅಕ್ಕಿಗೆ ಹಣವನ್ನು ನೀಡಲು ಪ್ರಾರಂಭಿಸಿದೆವು. ಮತ್ತೆ ಇತ್ತೀಚೆಗೆ ೧೦ ಕೆ.ಜಿ.ಅಕ್ಕಿ ನೀಡಲು ಸರ್ಕಾರ ಮುಂದಾಗಿದೆ. ಕೇವಲ ಅಕ್ಕಿ ನೀಡುವುದರಿಂದ ದುರುಪಯೋಗವಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ವ್ಯಕ್ತವಾದ ಕಾರಣ ಅಕ್ಕಿಯ ಜೊತೆಗೆ ರಾಗಿ, ಗೋಧಿ, ಅಡುಗೆ ಎಣ್ಣೆ ಕೊಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ದೇಶದ ವ್ಯವಸ್ಥೆಯಲ್ಲಿ ಬಡವರು ಹಾಗೂ ಸಾಮಾನ್ಯ ಜನಕ್ಕೂ ಆಹಾರ ಒದಗಿಸುವ ಕೆಲಸವಾಗಬೇಕು. ಕಾನೂನು ಜಾರಿಗೊಳಿಸಿ ಗ್ರಾಹಕರ ಹಿತ ಕಾಯುವುದು ಸರ್ಕಾರದ ಕರ್ತವ್ಯ. ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ರಾಜ್ಯದ ೩೧ ಜಿಲ್ಲೆಗಳಿಗೂ ಭೇಟಿ ನೀಡಿ ಆಹಾರ ಸುರಕ್ಷತೆಯ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮಾತನಾಡಿ, ಗ್ರಾಹಕರು ಮೋಸ ಹೋಗದ ರೀತಿ ಅರಿವು ಮೂಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಜೊತೆಗೆ ಎಲ್ಲಾ ೩೧ ಜಿಲ್ಲೆಗಳಲ್ಲೂ ಇಂತಹದೇ ಕಾರ್ಯಕ್ರಮ ಮಾಡುವುದರೊಂದಿಗೆ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದರು.
ಅನ್ಯಾಯಕ್ಕೆ ಒಳಗಾದ ಗ್ರಾಹಕರಿಗೆ ನ್ಯಾಯ ಕೊಡಿಸುವ ಕೆಲಸವಾಗುತ್ತಿದೆ. ಸಾರ್ವಜನಿಕರಿಗೆ ಆಹಾರ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಆಹಾರ ಭದ್ರತೆ ಕಾಯ್ದೆಯಡಿ ಎಲ್ಲಾ ಗ್ರಾಹಕರಿಗೂ ನ್ಯಾಯ ಒದಗಿಸುವ ಕೆಲಸವಾಗುತ್ತಿದೆ. ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಕೊಡುವುದು ಆಹಾರ ಭದ್ರತೆ ಕಾಯ್ದೆಯ ಮೂಲ ಉದ್ದೇಶ. ನ್ಯಾಯಬೆಲೆ ಅಂಗಡಿಗಳಲ್ಲಿ ವೈಜ್ಞಾನಿಕವಾಗಿ ಆಹಾರ ಸುರಕ್ಷತೆ ಮಾಡಬೇಕು ಎಂದು ಹೇಳಿದರು.ಕೆಲವು ಕಡೆ ಪಡಿತರ ಚೀಟಿ ರದ್ದಾಗಿದೆ, ಅದನ್ನು ಸದ್ಯದಲ್ಲೇ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಪಡಿತರ ಅಂಗಡಿಗಳಲ್ಲಿ ಅನ್ಯಾಯವಾದರೆ ಗ್ರಾಹಕರು ದೂರು ನೀಡಬಹುದು. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಧ್ಯಾಹ್ನದ ಊಟದಲ್ಲಿ ಕಳಪೆ ಕಂಡು ಬಂದು ದೂರು ಕೊಟ್ಟರೆ ಕ್ರಮ ವಹಿಸಲಾಗುತ್ತದೆ. ಆಹಾರ ಹಕ್ಕುಗಳ ಬಗ್ಗೆ ಜನರು ಜಾಗೃತರಾಗುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ಸತ್ಯಾನಂದ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಸಂಘದ ಅಧ್ಯಕ್ಷ ವಸಂತ್‌ಕುಮಾರ್ ಸೇರಿದಂತೆ ಇತರರಿದ್ದರು.