ಗದಗ: ಕೌಶಲ್ಯವಿರುವ ಯುವ ಸಮುದಾಯ ಹೊಂದಿರುವ ದೇಶದಲ್ಲಿ ಬಡತನವಿರಲು ಸಾಧ್ಯವೇ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನನಗೆ ಕೌಶಲ್ಯ ಅಭಿವೃದ್ಧಿ, ಕಾರ್ಮಿಕ ಹಾಗೂ ಟೆಕ್‌ಟೈಲ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಇಲಾಖೆಗಳ ಜವಾಬ್ದಾರಿ ಪ್ರಧಾನಿ ನೀಡಿದ್ದಾರೆ. ಪ್ರಧಾನ ಮಂತ್ರಿಯ ಕನಸು ಕೌಶಲ್ಯ ಭರಿತ ಭಾರತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ವರದಿ ನೀಡಲು ನಾನು ಶ್ರಮ ವಹಿಸುತ್ತೇನೆ ಎಂದರು.
ಇಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಬಂದಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದ ನಡುವೆ ಅಂತರ ಇದೆ. ಸಂಸ್ಥೆಗಳು ಬಯಸುವ ಉದ್ಯೋಗಕ್ಕೂ ನಾವು ಕಲಿಯುವುದಕ್ಕೂ ವ್ಯತ್ಯಾಸ ಇದೆ. ಅದನ್ನು ಸರಿಪಡಿಸಲು ಪದವಿ ಪಡೆಯುವ ಮೊದಲೇ ಕೌಶಲ್ಯ ತರಬೇತಿ ಪಡೆಯಬೇಕು. ಉದ್ಯೋಗ ಒಂದು ಘನತೆ ತಂದುಕೊಡುತ್ತದೆ. ಮೊದಲು ಭಾರತದ ಜನಸಂಖ್ಯೆಯ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದರು. ಜನಸಂಖ್ಯೆ ನಿಯಂತ್ರಿಸಬೇಕು ಎಂದು ಹೇಳುತ್ತಿದ್ದರು. ನಮ್ಮ ಪ್ರಧಾನಿಗಳು ಜನಸಂಖ್ಯೆಯಿಂದಲೇ ನಮ್ಮ ದೇಶದ ಆರ್ಥಿಕತೆ ಹೆಚ್ಚಿಸಲು ಸಾಧ್ಯ ಎಂದು ಹೇಳಿದರು. ಸುಮಾರು 40ರಷ್ಟು ಜನಸಂಖ್ಯೆ ಯುವಕರಿದ್ದಾರೆ ಅವರೇ ದೊಡ್ಡ ಆಸ್ತಿಯಾಗಿದ್ದಾರೆ ಎಂದರು.ಈಗೆಲ್ಲ ಇಂಗ್ಲಿಷ್ ಕೇಳುತ್ತಾರೆ. ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಭೂಗೋಳದಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಆದರೆ, ಗಣಿತ ವಿಷಯ ಬಂದಾಗ ಮೂವತ್ತೈದು ಅಂಕ ಪಡೆದು ಬರುತ್ತಾರೆ.
ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ವೈಜ್ಞಾನಿಕ ಜ್ಞಾನ ಬರುವಂತಹ ಶಿಕ್ಷಣ ನೀಡಬೇಕು. ಲರ್ನ್ ಅಂಡ್ ಅರ್ನ್ ಅಂತ ವ್ಯವಸ್ಥೆ ಇದೆ. ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವೇ ಸಂಬಳ ನೀಡಲಿದೆ. ಹೆಚ್ಚಿನ ಯುವಕರು ಅದರ ಲಾಭ ಪಡೆದುಕೊಳ್ಳಬೇಕು. ಗದಗಿಗೆ ಹೆಚ್ಚಿನ ಭವಿಷ್ಯವಿದೆ. ಔದ್ಯೋಗಿಕರಣ ಆಗಲಿದೆ. ಇಲ್ಲಿಯೇ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಇಲ್ಲಿನ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು. ನನ್ನ ಕನಸು ಯಾರು ಪದವಿ ಪಡೆದಿದ್ದಾರೆ. ತಾಂತ್ರಿಕ ತರಬೇತಿ ಪಡೆದಿದ್ದಾರೆ. ಅವರು ನಿರುದ್ಯೋಗಿಗಳಾಗಿರಬಾರದು. ಎಲ್ಲಿ ಹೋದರೂ ಉದ್ಯೋಗ ಸಿಗುವಂತಾಗಬೇಕು ಎಂದರು.ಸಂಸ್ಥೆ ಎಂದರೆ ಹೊಸ ಸಂಸ್ಥೆ ಕಟ್ಟುವುದಲ್ಲ. ನಮ್ಮಲ್ಲಿ ಐಟಿಐ, ಇಂಜನೀಯರಿಂಗ್ ಕಾಲೇಜುಗಳಿವೆ. ಅವುಗಳನ್ನು ಸಬಲೀಕರಣ ಮಾಡಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಹೊರಗೆ ಕಳುಹಿಸಿದರೆ ಅವರು ಸದೃಢರಾಗುತ್ತಾರೆ. ಇನ್ನೊಂದು ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದ್ದೆ, ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಸುಮಾರು ₹ 8 ಲಕ್ಷ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದೆ, ಅದನ್ನು ಈಗಿನ ಸರ್ಕಾರ ನಿಲ್ಲಿಸಿದೆ. ಕರಕುಶಲ ಕರ್ಮಿಗಳಾದ ಕಮ್ಮಾರ, ಕುಂಬಾರ, ಬಡಿಗ ಉದ್ಯೋಗ ಮಾಡುವವರಿಗೆ ತರಬೇತಿ ನೀಡಿ ಸಾಲ ನೀಡುವ ಯೋಜನೆ ರೂಪಿಸಿದ್ದೇವು. ಎಸ್ಸಿ ಎಸ್ಟಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲು ತರಬೇತಿ ನೀಡಲು ಯೋಜನೆ ರೂಪಿಸಿದ್ದೇವು. ಕಷ್ಟ ಪಟ್ಟು ದುಡಿಯುತ್ತೇನೆ ಎನ್ನುವವರಿಗೆ ಖಂಡಿತವಾಗಿಯೂ ಕೆಲಸ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಜರಿದ್ದರು.