ಎಸ್.ಜಿ. ತೆಗ್ಗಿನಮನಿ
ಮುಂಗಾರು ಹಂಗಾಮಿನಲ್ಲಿ ರೋಹಿಣಿ, ಕೃತಿಕಾ, ಮೃಗಶಿರಾ ಮಳೆ ಉತ್ತಮ ಆಗಿದ್ದರಿಂದ ರೈತರು ಹೆಸರು, ಗೋವಿನ ಜೋಳ, ಬಿಟಿ ಹತ್ತಿ, ಸೂರ್ಯಕಾಂತಿ, ತೊಗರಿ, ಈರುಳ್ಳಿ ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆಸಿದ್ದಾರೆ. ಆದರೆ ಕಳೆದೊಂದು ತಿಂಗಳಿನಿಂದ ಮಳೆ ಕೈಕೊಟ್ಟಿದ್ದರಿಂದ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ರೈತ ಸಮುದಾಯಕ್ಕೆ ದಿಕ್ಕು ತೋಚದಂತಾಗಿದೆ.
ತುಂಬದ ಕೃಷಿ ಹೊಂಡ: ಸರ್ಕಾರ ರೈತರಿಗೆ ಮಳೆ ಕೈಕೊಟ್ಟಾಗ ಕೃಷಿ ಹೊಂಡದಿಂದ ಬಿತ್ತನೆ ಮಾಡಿದ ಬೆಳೆಗಳನ್ನು ರಕ್ಷಣೆ ಮಾಡಲು ಅನುಕೂಲವಾಗಲೆಂದು ತಾಲೂಕಿನಲ್ಲಿ ಸುಮಾರು 2 ಸಾವಿರಕ್ಕಿಂತ ಹೆಚ್ಚು ಕೃಷಿ ಹೊಂಡಗಳನ್ನು ಕೃಷಿಭಾಗ್ಯ ಯೋಜನೆಯಲ್ಲಿ ಉಚಿತವಾಗಿ ನಿರ್ಮಿಸಿಕೊಟ್ಟಿದೆ. ಆದರೆ ಈ ವರ್ಷ ವಾಡಿಕೆ ಮಳೆ ಆಗದೇ ಇರುವುದರಿಂದ ಕೃಷಿ ಹೊಂಡಗಳೂ ತುಂಬಿಲ್ಲ. ಮತ್ತೊಂದು ಕಡೆ ಮಳೆಯೂ ರೈತ ಸಮುದಾಯಕ್ಕೆ ಕೈಕೊಟ್ಟಿದ್ದರಿಂದ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡುತ್ತಿವೆ.ಜಲಾಶಯದತ್ತ ಮುಖ: ಈ ಭಾಗದ ರೈತರ ಜೀವನಾಡಿಯಾಗಿರುವ ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗಿಲ್ಲ. ಹೀಗಾಗಿ ಡ್ಯಾಂನಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಜಲಾಶಯದಲ್ಲಿ ಹಿಂದಿನ ವರ್ಷ ಇದೇ ಸಮಯದಲ್ಲಿ 2078.40 ಅಡಿ ನೀರು ಸಂಗ್ರಹವಿತ್ತು. ಆದರೆ ಈ ವರ್ಷ 2066.70 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಲುವೆಗಳಿಗೆ ನೀರು ಬಿಡಲು ಸಾಧ್ಯವಿಲ್ಲವೆಂದು ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.
ತಾಲೂಕಿನಲ್ಲಿ ಮಳೆಯಿಲ್ಲದೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಆದ್ದರಿಂದ ಸರ್ಕಾರ ರೈತರಿಗೆ ಕೃಷಿ ಸಾಲಮನ್ನಾ, ಬೆಳೆಹಾನಿ ಪರಿಹಾರ, ಬೆಳೆವಿಮೆ ಪರಿಹಾರವನ್ನು ಬೇಗ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತಾಲೂಕಿನ ರೈತರು ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಎಚ್ಚರಿಕೆ ನೀಡಿದ್ದಾರೆ.