ಶೇ.100 ಗೆಲುವಿನ ವಿಶ್ವಾಸ ಇದೆ: ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ

KannadaprabhaNewsNetwork |  
Published : Apr 28, 2024, 01:16 AM IST
ಚಿತ್ರ : 27ಎಂಡಿಕೆ9 : ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿದರು. | Kannada Prabha

ಸಾರಾಂಶ

ಮತದಾರರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂಬ ವಿಶ್ವಾಸ ಇದೆ. ಈ ಭಾರಿ ಶೇ. 100 ಗೆಲುವಿನ ವಿಶ್ವಾಸ ಇದೆ ಎಂದು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮತದಾರರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂಬ ವಿಶ್ವಾಸ ಇದೆ. ಈ ಭಾರಿ ಶೇ.100 ಗೆಲುವಿನ ವಿಶ್ವಾಸ ಇದೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಜಾತಿ, ಧರ್ಮವನ್ನು ಟೀಕಿಸದೆ ಅಭಿವೃದ್ಧಿಯನ್ನು ಮುಂದಿರಿಸಿ ಚುನಾವಣೆ ಎದುರಿಸಿದ್ದು, ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ನಮಗೆ ಪೂರಕ ವಾತಾವರಣ ಸೃಷ್ಟಿಸಿದೆ ಎಂದರು.

ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಅಷ್ಟೇ ಅಲ್ಲದೆ ಜಾತಿ, ಭೇದ ಮರೆತು ಜನ ಅಭಿವೃದ್ಧಿಯ ಮುಖ ನೋಡಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ. ಮೈಸೂರಿನ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಬೈಯುವುದರಲ್ಲೇ ತಮ್ಮ ಭಾಷಣದ ಹೆಚ್ಚಿನ ಸಮಯವನ್ನು ಕಳೆದರು ಎಂದು ಅವರು ಕಿಡಿಕಾರಿದರು.

ಎರಡು ಕಡೆ ಕಚೇರಿ: ಸಂಸದನಾಗಿ ಆಯ್ಕೆಯಾದ ಬಳಿಕ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಕಚೇರಿ ತೆರೆಯುತ್ತೇನೆ. ಸ್ಥಳೀಯ ಶಾಸಕರೊಂದಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ಕರ್ನಾಟಕಕ್ಕೆ ದೊರಕಬೇಕಾದ ತೆರಿಗೆ ಹಣವನ್ನು ತೆಗೆದುಕೊಂಡು ಬರುತ್ತೇವೆ ಎಂದರು.

ಚುನಾವಣೆಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದೇನೆ. ಕುಟುಂಬದೊಂದಿಗೆ ಮೂರು ದಿನ ಪ್ರವಾಸಕ್ಕೆ ತೆರಳಿ, ವಿಶ್ರಾಂತಿ ಪಡೆಯಲಿದ್ದು, ನಂತರ ಮೇ 7 ರಂದು ನಡೆಯುವ ಎರಡನೇ ಹಂತದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಲು ತಂಡದೊಂದಿಗೆ ತೆರಳಲಿದ್ದೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಎನ್.ಆರ್. ನಾಗೇಶ್, ಕೆ. ಮಹೇಶ್, ಗಿರೀಶ್ ಇದ್ದರು.

ಗೆದ್ದ ಮೇಲೆ ಪ್ರತಾಪ್ ಸಿಂಹ ಭೇಟಿ: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರತಾಪ್ ಸಿಂಹ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ಸುಳ್ಳನ್ನು ಹೇಗೆ ಸತ್ಯದ ತಲೆ ಮೇಲೆ ಹೊಡೆದಂತೆ ಮಾತನಾಡಬೇಕು ಎಂಬುದನ್ನು ಅವರಿಂದಲ್ಲೇ ಕಲಿಯಬೇಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ವ್ಯಂಗ್ಯವಾಡಿದರು.

ನಾನು ಗೆದ್ದ ಮೇಲೆ ಪ್ರತಾಪ್ ಸಿಂಹ ಮನೆಗೆ ಹೋಗ್ತೀನಿ. ಹಾರ ಹಾಕಿ ಸುಳ್ಳು ಹೇಳೋದು ಹೇಗೆ ಅಂತಾ ಸಲಹೆ ಕೇಳ್ತೀನಿ. ಪ್ರತಾಪ್ ಸಿಂಹ ಎಲ್ಲಿಯೂ ಕಾಣ್ತಾ ಇಲ್ಲ. ಚುನಾವಣೆ ಸಂದರ್ಭದಲ್ಲಿ ಒಮ್ಮೆ ಬೆಂಗಳೂರಲ್ಲಿ ಪ್ರತಾಪ್ ಸಿಂಹ ನಾನು ಭೇಟಿಯಾಗಿದ್ದೇವು. ಇಬ್ಬರೂ ಕಾಫಿ ಕುಡಿದಿದ್ದೇವು. ಏಕೆ ನಿಮಗೆ ಟಿಕೆಟ್ ಮಿಸ್ ಆಯ್ತು ಅಂತಾ ನಾನೇ ಕೇಳ್ದೆ. ಅವರು ಆಮೇಲೆ ಹೇಳ್ತೀನಿ ಬಿಡಿ ಅಂತಾ ಹೇಳಿದರು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು
ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಟಿ.ಎಂ. ಶಾಹೀದ್