ಕನಕಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10ಗಂಟೆಗೆ ಕನಕಪುರಕ್ಕೆ ಆಗಮಿಸುವ ಸಿಎಂ ಬಳಿಕ, ಕ್ಷೇತ್ರವ್ಯಾಪ್ತಿಯ 20 ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಸಿಎಂ ಆಗುವ ತಮ್ಮ ಕನಸನ್ನು ನನಸಾಗಿಸಲು ಹರಸಿದ ತವರೂರಿನ ಜನತೆಗೆ ಕೃತಜ್ಞತೆ ಅರ್ಪಿಸಲಿದ್ದಾರೆ.
ಬೆಳಗ್ಗೆ 10ರಿಂದ ರಾತ್ರಿ10ರವರೆಗೆ ಭಾನುವಾರ ಇಡೀ ದಿನ ಪ್ರವಾಸ
ಬೆಳಗ್ಗೆ 10ರಿಂದ ರಾತ್ರಿ10ರವರೆಗೆ ಭಾನುವಾರ ಇಡೀ ದಿನ ಕನಕಪುರ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಪ್ರತಿ ಗ್ರಾ.ಪಂ.ಗೂ 30 ನಿಮಿಷಗಳ ಭೇಟಿಗೆ ಸಮಯ ನಿಗದಿಪಡಿಸಿದ್ದಾರೆ.
ಸಿಎಂ ಆದ ಬಳಿಕ ಮೊದಲ ಸಲ ತವರಿಗೆ ಆಗಮಿಸುತ್ತಿರುವ ನಾಯಕನ ಅದ್ದೂರಿಯಾಗಿ ಸ್ವಾಗತಿಸಲು ಪಕ್ಷದ ಕಾರ್ಯಕರ್ತರು, ಮುಖಂಡರು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೆಡೆ ಸಿಎಂಗೆ ಶುಭಾಶಯ ಕೋರುವ ಬ್ಯಾನರ್ ರಾರಾಜಿಸುತ್ತಿವೆ. ಭೇಟಿ ವೇಳೆ ಎಲ್ಲೆಡೆ ಸಾರ್ವಜನಿಕರಿಗೆ ಸಿಹಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ತುಂಗಣಿ ಗ್ರಾಮದಿಂದ ಸಿಎಂ ಪ್ರವಾಸ ಆರಂಭ
ಬೆಳಗ್ಗೆ 10 ಗಂಟೆಗೆ ಕಸಬಾ ಹೋಬಳಿಯ ತುಂಗಣಿ ಗ್ರಾಮದಿಂದ ಸಿಎಂ ತಮ್ಮ ಪ್ರವಾಸ ಆರಂಭಿಸಲಿದ್ದಾರೆ. 0.30ಕ್ಕೆ ತಮ್ಮ ಮನೆ ದೇವತೆ ಕೆಂಕೇರಮ್ಮ ತಾಯಿಗೆ ಪೂಜೆ ಸಲ್ಲಿಸಿ, ನಂತರ, ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ, ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮಕ್ಕೆ ಆಗಮಿಸಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಅಲ್ಲಿಂದ ಪ್ರವಾಸ ನಗರದ ಎಂ.ಜಿ.ರಸ್ತೆ, ಟಿ.ಬೇಕುಪ್ಪೆ ವೃತ್ತ, ನಾರಾಯಣಪುರ ಗ್ರಾಮದ ಮೂಲಕ ಕೋಡಿಹಳ್ಳಿಗೆ ಭೇಟಿ ನೀಡಲಿದ್ದಾರೆ. ಡಿಕೆಶಿಯವರಿಗೆ ಪ್ರತಿ ಚುನಾವಣೆಯಲ್ಲಿ ಶಕ್ತಿ ತುಂಬುವ ಹಾಗೂ ಅವರ ಅಚ್ಚುಮೆಚ್ಚಿನ ಗ್ರಾಮವಾದ ಕೋಡಿಹಳ್ಳಿ ಗ್ರಾಮದ ವೃತ್ತದಲ್ಲಿ ಈಗಾಗಲೇ ಹತ್ತಾರು ಅಡಿ ಎತ್ತರದ ಕಟೌಟ್‌ಗಳನ್ನು ನಿಲ್ಲಿಸಿ, ಊರಿನ ತುಂಬಾ ಸ್ವಾಗತದ ಬ್ಯಾನರ್ ಹಾಕಲಾಗಿದೆ.
ಡಿಕೆಶಿ, ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಯೇ ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ಭೋಜನ ಸೇವಿಸಿ, ಸ್ವಲ್ಪ ಕಾಲ ವಿಶ್ರಾಂತಿ ಪಡೆದು, ನಂತರ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ತವರೂರು ಹೂಕುಂದ ಗ್ರಾಮಕ್ಕೆ ತೆರಳಲಿದ್ದಾರೆ. ಬಳಿಕ, ರಾತ್ರಿ 9ರ ವೇಳೆಗೆ ಕನಕಪುರದ ಮೇಗಳಬೀದಿಗೆ ಆಗಮಿಸಿ, ಚನ್ನಬಸಪ್ಪ ವೃತ್ತದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
