ರಾಜ್ಯದಲ್ಲಿರುವುದು 25 ಪರ್ಸಂಟ್‌ ಸರ್ಕಾರ: ಎನ್‌.ರವಿಕುಮಾರ್‌

KannadaprabhaNewsNetwork | Published : Mar 1, 2025 1:00 AM

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್.ಸಿ.ಎಸ್.ಪಿ. - ಟಿ.ಎಸ್.ಪಿ. ಯೋಜನೆಯ ಸುಮಾರು 25,000 ಕೋಟಿ ರು. ಹಣ ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿ ಅಧಿಕಾರದಲ್ಲಿರುವುದು 25 ಪರ್ಸೆಂಟ್‌ ಸರ್ಕಾರ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಎನ್. ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್.ಸಿ.ಎಸ್.ಪಿ. - ಟಿ.ಎಸ್.ಪಿ. ಯೋಜನೆಯ ಸುಮಾರು 25,000 ಕೋಟಿ ರು. ಹಣ ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ದಲಿತರ ವಿವಿಧ ಅಭಿವೃದ್ಧಿ ನಿಗಮಗಳಿಗೆ ತೆಗೆದಿರಿಸಲಾಗಿದ್ದ ಅನುದಾನದಲ್ಲಿ ಶೇ. 25ರಷ್ಟನ್ನು ಮಾತ್ರ ಬಳಕೆ ಮಾಡಿದೆ. ಆದ್ದರಿಂದ ಇಂದು 25 ಪರ್ಸೆಂಟ್‌ ಸರ್ಕಾರ. ಉಳಿದ ಶೇ 75 ಅನುದಾನವನ್ನು ತನ್ನ ಗ್ಯಾರಂಟಿ ಯೋಜನೆಗೆ ಬಳಸಿ, ದಲಿತರಿಗೆ, ಹಿಂದುಳಿದವರಿಗೆ ಮೋಸ ಮಾಡಿದೆ. ಇದು ದಲಿತ ವಿರೋಧಿ ಸರ್ಕಾರ ಎಂದರು.

ಬಿಜೆಪಿ ಸರ್ಕಾರ ಕೋವಿಡ್‌ ಸಂದರ್ಭದಲ್ಲಿಯೂ ದಲಿತರಿಗಾಗಿ ತೆಗೆದಿರಿಸಿದ್ದ ಶೇ. 97 ಅನುದಾನ ಸದ್ಬಳಕೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ 2023ರಲ್ಲಿ ದಲಿತರ ಮೀಸಲು ಅನುದಾನದಲ್ಲಿ 11,000 ಕೋಟಿ ಮತ್ತು 2024ರಲ್ಲಿ 14,000 ಕೋಟಿ ರು.ಗಳನ್ನು ಗ್ಯಾರಂಟಿಗೆ ಬಳಸಿದೆ. ಯಾಕೆಂದರೆ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಇದು ಖಜಾನೆ ಖಾಲಿ ಸರ್ಕಾರ ಎಂದು ವ್ಯಂಗ್ಯವಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ದಲಿತರ 11,000 ಕೋಟಿ ರು. ಗ್ಯಾರಂಟಿಗೆ ಬಳಸಲಿದ್ದಾರೆ. ಆದರೆ ದಲಿತರಿಗಾಗಿ ಮೀಸಲಿರುವ ಅನುದಾನದಲ್ಲಿ 1 ಪೈಸೆ ತೆಗೆದರೂ ಬಿಜೆಪಿ ಸುಮ್ಮನಿರುವುದಿಲ್ಲ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಸದ ರಮೇಶ್‌ ಜಿಗಜಿಣಗಿ ಮಾತನಾಡಿ, ಎಸ್ಸಿಎಸ್ಟಿ ಸಮುದಾಯಕ್ಕೆ ಅನುದಾನ ಮೀಸಲಿಡುವುದಕ್ಕಾಗಿಯೇ 7ಡಿ ಕಾಯ್ದೆ ಇದೆ, ಅದನ್ನೇ ನಾಶ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು, ಅವರಿಗೆ ದಲಿತರು ಪಾಠ ಕಲಿಸಬೇಕು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಕಿರಣ್‌ ಕೊಡ್ಗಿ, ಸುರೇಶ್‌ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್ ಕುಂದಾಪುರ, ಎಸ್ಸಿಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಸಾಬು ದೊಡ್ಮನಿ, ಉಪಾಧ್ಯಕ್ಷ ಗೋಪಾಲ ಕಾಂಬ್ಳೆ, ಕಾರ್ಯಕಾರಣಿ ಸದಸ್ಯ ಓದುವ ಗಂಗಪ್ಪ, ಮಾಜಿ ಶಾಸಕ ಹರ್ಷವರ್ಧನ, ಪಕ್ಷದ ನಾಯಕರಾದ ಉದಯಕುಮಾರ್ ಶೆಟ್ಟಿ, ದಿನಕರ ಬಾಬು, ಕುಯಿಲಾಡಿ ಸುರೇಶ್‌ ನಾಯಕ್‌, ಚಂದ್ರ ಪಂಚವಟಿ, ದಿನಕರ ಶೆಟ್ಟಿ ಹೆರ್ಗ ಮುಂತಾದವರಿದ್ದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರ ಮೂಲಕ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Share this article