ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇಲ್ಲೊಂದು ಗ್ರಾಮ ಅದೂ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ. ಇಲ್ಲಿ ಎಸ್‌ಬಿಐ ಬ್ಯಾಂಕ್ ಇದೆ. ಹಾಲಿನ ಡೇರಿ ಇದೆ. ಪಶುಪಾಲನಾ ಆಸ್ಪತ್ರೆ ಇದೆ. ಪಂಚಾಯಿತಿ ಕಚೇರಿ ಇದೆ. ಡಿಜಿಟಲ್ ಲೈಬ್ರೇರಿ ಇದೆ. ಸರ್ಕಾರಿ ಶಾಲೆ ಇದೆ. ಕ್ರಷರ್ ಇದೆ ಆದರೆ ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕವೆ ಇಲ್ಲ.ಶುದ್ಧ ನೀರು ತರಲು ಎರಡು- ಮೂರು ಕಿಲೋ ಮೀಟರ್ ದೂರ ಹೋಗಿ ಅಲ್ಲಿನ ಘಟಕಗಳಿಂದ ತರಬೇಕು. ಉಳಿದೆಲ್ಲ ಸೌಕರ್ಯ ಇದ್ದರೂ ಶುದ್ಧ ನೀರಿನ ಘಟಕ ಇಲ್ಲದ ಗ್ರಾಮ ಪಂಚಾಯತಿ ಕೇಂದ್ರವೇ ತಾಲೂಕಿನ ಎಸ್,ಗೊಲ್ಲಹಳ್ಳಿ ಗ್ರಾಮ.120 ಮನೆಗಳ ಗ್ರಾಮ
ನಗರಕ್ಕೆ ಎಂಟು ಕಿಲೊ ಮೀಟರ್ ಅಂತರದಲ್ಲಿರೋ ಈ ಗ್ರಾಮದಲ್ಲಿ ಬ್ಯಾಂಕ್ , ಪಶುಪಾಲನಾ ಆಸ್ಪತ್ರೆ, ಹಾಲು ಉತ್ಪಾದಕರ ಸಹಕಾರ ಸಂಘ ಇದೆ. ಊರಿಗೆ ಅಂಟಿಕೊಂಡಂತೆ ಕಲ್ಲು ಕ್ರಷರ್ ಗಳಿವೆ, ಖಾಸಗಿ ಕನ್ನಡ ಪ್ರೌಢಶಾಲೆ ಇದೆ. 120 ಮನೆಗಳಿರುವ ಈ ಗ್ರಾಮದಲ್ಲಿ ಎಂಟನೂರು ರಿಂದ ಒಂದು ಸಾವಿರ ಜನಸಂಖ್ಯೆ ಇದೆ ಇಂತದೊಂದು ಗ್ರಾಮಕ್ಕೆ ಶುದ್ದು ಕುಡಿಯುವ ನೀರಿನ ಘಟಕವೆ ಇಲ್ಲ.ಎಷ್ಟೋ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟಿರುವ ಮಾಜಿ ಸಚಿವ ಡಾ ಕೆ.ಸುಧಾಕರ್ ರವರ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನೀರು ಇವರಿಗೆ ಸಿಕ್ಕಿಲ್ಲ. ಊರಲ್ಲಿರೋ ಬ್ಯಾಂಕ್ ಶಾಖೆ ಸಿಎಸ್ ಆರ್ ಫಂಡ್‌ನಿಂದಾದರೂ ನೀರಿನ ಘಟಕ ನಿರ್ಮಿಸಿಲ್ಲ. ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದವರೂ ಸಹ ಶುದ್ದ ಕುಡಿಯುವ ನೀರು ಕೊಡಲು ಮುಂದಾಗಿಲ್ಲ.
ಘಟಕ ಕಾಮಗಾರಿ ಅಪೂರ್ಣಆದರೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಘಟಕ ನಿರ್ಮಣದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಶುದ್ಧ ನೀರು ಸಿಗದಂತಾಗಿದೆ. ಇನ್ನೂ ಈ ಊರಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ರಸ್ತೆಗಳ ಮೇಲೆ ಚರಂಡಿ ನೀರು ಹರಿಯುತ್ತದೆ. ಚರಂಡಿಗಳಲ್ಲಿ ಹೂಳು ತುಂಬಿ ಹೋಗಿದೆ. ರಸ್ತೆಗಳೆ ಒತ್ತುವರಿ ಮಾಡಿ ಮನೆಗಳು ಕಟ್ಟಿಕೊಂಡಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಈ ವಿಷಯದಲ್ಲಿ ಮೌನವಾಗಿದ್ದಾರೆ.