ನಾಡ್ಪಾಲು ಗ್ರಾಮದಲ್ಲೀಗ ಮಡುಗಟ್ಟಿದ ಆತಂಕ

KannadaprabhaNewsNetwork |  
Published : Nov 23, 2024, 12:32 AM IST
ಜಯಂತ್‌ ಗೌಡ ಮನೆ | Kannada Prabha

ಸಾರಾಂಶ

ಸೋಮವಾರ ಸಂಜೆ ನಿಶ್ಯಬ್ದ ಕಾಡಿನಂಚಿನಲ್ಲಿ ಗುಂಡಿನ ಮೊರೆತ, ಮಂಗಳವಾರ ಇಡೀ ದಿನ ಊರಿನ ಇದ್ದ ರಸ್ತೆಗಳಲ್ಲೆಲ್ಲ ಓಡಾಡಿದ ಹತ್ತಿಪ್ಪತ್ತು ಪೊಲೀಸ್‌ ಜೀಪುಗಳು, ಬಾಡಿಗೆ ವಾಹನಗಳು, ಆಂಬುಲೆನ್ಸ್‌ಗಳ ಕರ್ಕಶ ಸದ್ದು, ಕಣ್ಣೀರು, ಅಳು ಎಲ್ಲ ಮುಗಿದಿದ್ದು, ಇದೀಗ ಇಡೀ ಗ್ರಾಮವೇ ನೀರವ ಮೌನದಲ್ಲಿ ಮುಳುಗಿದೆ.

ನಕ್ಸಲ್‌ ನಾಯಕನ ಎನ್‌ಕೌಂಟರ್‌ ಹಿನ್ನೆಲೆ । ಗುಂಡಿನ ಚಕಮಕಿಗೆ ಸಾಕ್ಷಿ ಹೇಳುತ್ತಿದೆ ಜಯಂತಗೌಡರ ಮನೆ

ರಾಮ್ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಸೋಮವಾರ ಸಂಜೆ ಮೂರು ರಾಜ್ಯಗಳ ಮೋಸ್ಟ್ ವಾಂಟೇಡ್ ನಕ್ಸಲ್ ನಾಯಕ ವಿಕ್ರಮ್ ಗೌಡನ ಎನ್‌ಕೌಂಟರ್‌ ನಡೆದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲೀಗ ಅವ್ಯಕ್ತ ಆತಂಕ ಮಡುಗಟ್ಟಿದೆ.ಸೋಮವಾರ ಸಂಜೆ ನಿಶ್ಯಬ್ದ ಕಾಡಿನಂಚಿನಲ್ಲಿ ಗುಂಡಿನ ಮೊರೆತ, ಮಂಗಳವಾರ ಇಡೀ ದಿನ ಊರಿನ ಇದ್ದ ರಸ್ತೆಗಳಲ್ಲೆಲ್ಲ ಓಡಾಡಿದ ಹತ್ತಿಪ್ಪತ್ತು ಪೊಲೀಸ್‌ ಜೀಪುಗಳು, ಬಾಡಿಗೆ ವಾಹನಗಳು, ಆಂಬುಲೆನ್ಸ್‌ಗಳ ಕರ್ಕಶ ಸದ್ದು, ಕಣ್ಣೀರು, ಅಳು ಎಲ್ಲ ಮುಗಿದಿದ್ದು, ಇದೀಗ ಇಡೀ ಗ್ರಾಮವೇ ನೀರವ ಮೌನದಲ್ಲಿ ಮುಳುಗಿದೆ.

ಸೋಮವಾರದಿಂದ ಇಲ್ಲಿನ ಕಬ್ಬಿನಾಲೆ, ಮುದ್ರಾಡಿ. ಪೀತಬೈಲ್, ಕೂಡ್ಲು ಪ್ರದೇಶಗಳಲ್ಲಿ ಜನರ ಜೀವನವೇ ಸ್ಥಗಿತಗೊಂಡಂತಿದೆ. ಇಲ್ಲಿರುವ ಕೆಲವೇ ಮನೆಗಳ ಮುಂದೆ ಯಾರೂ ಬಂದರೂ ಅಲ್ಲಿನ ಜನರು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದೀಗ ನಾಲ್ಕು ದಿನಗಳ ಬಳಿಕ ಎನ್‌ಕೌಂಟರ್‌ ನಡೆದ ಪೀತಬೈಲಿನ ಜಯಂತ ಗೌಡರ ಮನೆಗೆ ಭೇಟಿ ನೀಡುವುದಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸ್ ಇಲಾಖೆ ಶುಕ್ರವಾರ ಅವಕಾಶ ನೀಡಿತ್ತು. ಜಯಂತ ಗೌಡರ ಹಂಚಿನ ಮನೆ ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ಭೀಕರ ಗುಂಡಿನ ಚಕಮಕಿಗೆ ಸಾಕ್ಷಿ ಹೇಳುತ್ತಿದೆ.

ಎನ್‌ಕೌಂಟರ್ ಬಗ್ಗೆ ಈಗಾಗಲೇ ಕಾರ್ಕಳ ತಾಲೂಕು ನ್ಯಾಯಾಧೀಶರು ತನಿಖೆ ಆರಂಭಿಸಿದ್ದಾರೆ. ಕಳೆದೆರಡು ದಿನಗಳ ಕಾಲ ವಿಧಿವಿಜ್ಞಾನ ಮತ್ತು ಬ್ಯಾಲೆಸ್ಟಿಕ್ (ಮದ್ದುಗುಂಡು) ತಜ್ಞರು ಬಂದು ಎನ್‌ಕೌಂಟರ್‌ಗೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಸೋಮವಾರದ ನಂತರ ಇಲ್ಲಿನ ಜಯಂತ ಗೌಡ, ನೆರೆಯ ಸುಧಾಕರ ಗೌಡ ಮತ್ತು ನಾರಾಯಣ ಗೌಡರ ಮನೆಗಳು ಪಾಳು ಬಿದ್ದಿವೆ, ಮನೆಗಳಿಗೆ ಬೀಗವೂ ಹಾಕಿಲ್ಲ. ಅವರು ಸಾಕಿದ್ದ ನಾಯಿಗಳು ಹೊಟ್ಟೆಗಿಲ್ಲದೇ ಮನೆ ಮುಂದೆ ಕಂಗಾಲಾಗಿವೆ. ಗೂಡಿನಿಂದ ಹೊರಗೆ ಬಿಟ್ಟ ಕೋಳಿಗಳು ಅಲ್ಲಿಲ್ಲಿ ಓಡಾಡುತ್ತಿವೆ. ಮೇಯಲೆಂದು ಗುಡ್ಡೆಗೆ ಬಿಟ್ಟಿದ್ದ ದನಗಳು ಮನೆಯ ಬಳಿ ಬಂದು ಕಟ್ಟಿಹಾಕಬೇಕಾಗಿದ್ದ ಮನೆಯ ಯಜಮಾನಿಯನ್ನು ಕಾಯುತ್ತಿವೆ.ವಿಕ್ರಮ್‌ ಗೌಡನನ್ನು ಪೊಲೀಸರು ಜಯಂತ ಗೌಡರ ಮನೆಯ ಮುಂದಿನ ತಗಡು ಚಪ್ಪರದೊಳಗೆ ಹೊಡೆದುರುಳಿಸಿದ್ದಕ್ಕೆ ರಕ್ತದ ಸಾಕ್ಷಿ, ನಂತರ ಪೊಲೀಸರು ಮಹಜರಿಗೆ ಮಾಡಿದ ಚಾಕ್‌ ಗುರುತು ಅಲ್ಲಿದೆ.

ಮನೆಯ ಮುಂದಿನ ಮಣ್ಣಿನ ತುಳಸಿಕಟ್ಟೆಗೂ ಗುಂಡು ಬಿದ್ದಿದೆ. ಅಂಗಳದಲ್ಲಿರುವ ಅಡಕೆ ಮರ, ತೆಂಗಿನ ಮರಗಳಲ್ಲಿ 5 ಗುಂಡುಗಳ ಕಲೆಯಿದೆ. ಅಡುಗೆ ಕೋಣೆಯ ಗೋಡೆಯಲ್ಲಿ 3, ಚಾವಡಿ ಗೋಡೆಯಲ್ಲಿ 2 ಗುಂಡಿನ ಗುರುತುಗಳು ಎನ್‌ಕೌಂಟರ್‌ನ ಭೀಕರತೆಯನ್ನು ಸಾರುತ್ತಿವೆ.ಜಯಂತ ಗೌಡರ ಮನೆಯಲ್ಲಿ ಸೋಮವಾರ ಮಾಡಿದ್ದ ಅನ್ನ, ಪಲ್ಯ ಒಲೆಯ ಮೇಲೆಯೇ ಇದ್ದು ಹಳಸಿದೆ. ಇದು ಇಡೀ ಮನೆಯ ಅನಾಥ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.

-------------------------ಮನೆಗೆ ಬರಬೇಡಿ ಎಂದರು...

ಜಯಂತ ಗೌಡ, ಪತ್ನಿ ಗಿರಿಜಾ ಇಲ್ಲಿಯೇ ಸಮೀಪದ ಪುಳ್ಳಂತಬೆಟ್ಟುವಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅಂದು ಜಯಂತ ಗೌಡರು ಕೂಲಿ ಕೆಲಸಕ್ಕೆ ಹೋಗಿದ್ದರು. ಗಿರಿಜಾ ಅವರು ಕೈಮುರಿದುಕೊಂಡಿದ್ದ ಮಗನ ಚಿಕಿತ್ಸೆಗೆ ಹೆಬ್ರಿ ಪೇಟೆಗೆ ಹೋಗಿದ್ದರು.

ಸೋಮವಾರ ಸಂಜೆ ಪೊಲೀಸರು, ನಿಮ್ಮ ಮನೆಯಲ್ಲಿ ಎನ್‌ಕೌಂಟರ್ ನಡೆದಿದೆ, ಆದ್ದರಿಂದ ಮನೆಗೆ ಬರಬೇಡಿ ಎಂದು ಹೇಳಿದರು. ಆವತ್ತಿನಿಂದ ನಾವು ಇಲ್ಲಿ ಮಗಳ ಮನೆಗೆ ಬಂದಿದ್ದೇವೆ ಎಂದು ಗಿರಿಜಾ ಹೇಳಿದರು.

ಶುಕ್ರವಾರ ಮುಂಜಾನೆ ಪುಳ್ಳಂತಬೆಟ್ಟುವಿಗೆ ಬಂದ ಪೊಲೀಸರು ತರಾತುರಿಯಲ್ಲಿ ತಮ್ಮ ಯಜಮಾನರನ್ನು ಕರೆದೊಯ್ದಿದ್ದಾರೆ. ಯಾಕೆಂದು ಗೊತ್ತಿಲ್ಲ, ಏನು‌ ಮಾಡ್ತಾರೋ ಗೊತ್ತಿಲ್ಲ, ಬೆಳಗ್ಗೆ ಊಟ ಮಾಡಲಿಕ್ಕೂ ಬಿಡದೇ ಎಳೆದೊಯ್ದರು, ಉಪವಾಸ ಇದ್ದಾರೆ. ಕಿರುಕುಳ ಕೊಡುತ್ತಾರೇನೋ ಎಂದು ಭಯವಾಗ್ತಿದೆ. ನಮಗೆ ನಕ್ಸಲಿಯರ ಬಗ್ಗೆ ಏನೂ ಗೊತ್ತಿಲ್ಲ ಎಂದು ಕಣ್ಣೀರು ಸುರಿಸಿದರು.* ಠಾಣೆಗೆ ಗ್ರಾಮಸ್ಥರ ಮುತ್ತಿಗೆ

ಶುಕ್ರವಾರ ಜಯಂತ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಹರಡುತ್ತಿದ್ದಂತೆ ಕಬ್ಬಿನಾಲೆ, ಕೂಡ್ಲು ಗ್ರಾಮಸ್ಥರು ಹೆಬ್ರಿ ಠಾಣೆಗೆ ಮುತ್ತಿಗೆ ಹಾಕಿದರು. ಬಳಿಕ ಹೆಬ್ರಿ ಪೋಲೀಸರು ಜಯಂತ ಗೌಡರನ್ನು ಬಿಡುಗಡೆಗೊಳಿಸಿದರು. ಜಯಂತ ಗೌಡರು ಅಮಾಯಕ, ವಿಚಾರಣೆ ಮಾಡುವುದಿದ್ದರೆ ಮನೆಯಲ್ಲೇ ಮಾಡಬಹುದಿತ್ತು, ಅಲ್ಲಿಗೆ ಯಾಕೆ ಎಳೆತಂದಿದ್ದೀರಿ ಎಂದು ಮಲೆಕುಡಿಯ ಸಂಘದ ಜಿಲ್ಲಾ ಅಧ್ಯಕ್ಷ ಗಂಗಾಧರ ಗೌಡ ಈದು ಮುಂತಾದವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಂಜೆ 3 ಗಂಟೆಗೆ ಪೊಲೀಸರು ಗೌಡರನ್ನು ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ