ನಿವೇಶನ ಹಂಚಿಕೆಯಲ್ಲಿ ಭಾರೀ ಗೋಲ್ಮಾಲ್‌:

KannadaprabhaNewsNetwork |  
Published : Jul 20, 2024, 12:47 AM IST
ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಐ.ಡಿ.ಎಸ್.ಎಂಟಿ ಯೋಜನೆ ಅಡಿಯಲ್ಲಿ ನಿವೇಶ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಐಡಿಎಸ್ಎಂಟಿ ಯೋಜನೆ ಅಡಿಯಲ್ಲಿ ನಿವೇಶ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರಸಭೆ ವ್ಯಾಪ್ತಿಯಲ್ಲಿ ಬರುವ ಐಡಿಎಸ್ಎಂಟಿ ಯೋಜನೆ ಅಡಿಯಲ್ಲಿ ನಗರಸಭೆ ಅಧಿಕಾರಿಗಳು ನಿವೇಶನ ಹಂಚಿಕೆಗಳಲ್ಲಿ ಭಾರಿ ಅವ್ಯವಹಾರ ನಡೆಸಿದ್ದು, ಈ ಅಕ್ರಮದ ಬಗ್ಗೆ ತನಿಖಾ ತಂಡ ರಚನೆ ಮಾಡಿ ಅಕ್ರಮದಲ್ಲಿ ಭಾಗಿಯಾದ ನಗರಸಭೆ ಅಧಿಕಾರಿಗಳ ಮತ್ತು ಕಾಣದ ಕೈಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ನಿರ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಅವರು, ನಗರದ ಐಡಿಎಸ್ಎಂಟಿ ಯೋಜನೆ ಅಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿವೆ. ಈ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು ಇದ್ದರೂ ಕೂಡ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದರೂ ಕೂಡ ತನಿಖೆ ನಡೆಸದೆ ಮೌನ ವಹಿಸಿರುವದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿವೇಶನ ಸಂಖ್ಯೆ 392 ಡಿಸೋಜ ಎನ್ನುವರಿಗೆ ಹಂಚಿಕೆಯಾಗಿತ್ತು. ಆದರೆ ಈ ನಿವೇಶನ ವೀರೇಂದ್ರ ಕುಮಾರ್ ಕುಂಬಾರ್ ಎಂಬುವರಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇವರಿಗೆ ಈಗಾಗಲೇ ನಿವೇಶನ ಸಂಖ್ಯೆ 811 ಹಂಚಿಕೆಯಾಗಿದೆ. ನಗರಸಭೆ ಅಧಿಕಾರಿಗಳು ಮತ್ತು ಕಾಣದ ಕೈಗಳು ಸೇರಿ 392 ಸಂಖ್ಯೆ ನಿವೇಶನವನ್ನು ಮತ್ತೆ ಅಕ್ರಮವಾಗಿ ಅಕ್ಬರ್ ಸಾಬ್ ಮಹಮ್ಮದ್ ಸಾಬ್ ಇವರಿಗೆ ಮಾರಾಟ ಮಾಡಲಾಗಿದೆ, ಇಂತಹ ಅನೇಕ ಉದಾಹರಣೆಗಳಿವೆ ಎಂದು ದೂರಿದರು.

ಬಹುತೇಕ ನಿವೇಶನಗಳು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಸರ್ಕಾರದ ಕೋಟ್ಯತರ ಆಸ್ತಿ ಉಳಿಸಬೇಕಾದ ನಗರಸಭೆ ಅಧಿಕಾರಿಗಳು ಅದನ್ನು ಮನಸ್ಸಿಗೆ ಬಂದಂತೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಸರ್ಕಾರಿ ಆಸ್ತಿಗೆ ಕನ್ನ ಹಾಕಿದ್ದಾರೆ.

ಈ ಅಕ್ರಮದಲ್ಲಿ ಹಿಂದಿನ ಪುರಾಯುಕ್ತ ಓಂಕಾರ ಪೂಜಾರಿ, ಸೆಕ್ಷನ್ ಕ್ಲರ್ಕ್ ಮಾನಪ್ಪ ಹಾಗೂ ಕಾಣದ ಕೈಗಳು ನೇರ ಕಾರಣರಾಗಿದ್ದಾರೆ. ಈಗಿನ ಪೌರಾಯುಕ್ತ ರಮೇಶ್ ಬಡಿಗೇರ್ ಅವರು ಐಡಿಎಸ್‌ಎಂಟಿ ನಿವೇಶನ ಹಂಚಿಕೆಯಲ್ಲಿ 14 ನಿವೇಶನಗಳು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಆದರೆ 392ರ ನಿವೇಶನ ಇದರಲ್ಲಿ ನಮೂದಿಸದೆ ಅಕ್ರಮ ಎಸಗಿದ್ದಾರೆ. ಈ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ತನಿಖಾ ತಂಡ ರಚಿಸಿ ಅಕ್ರಮ ಎಸಿಗಿರುವ ಅಧಿಕಾರಿಗಳ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷಿಸಿದರೆ ಜು.30 ರಂದು ನಗರ ಸಭೆ ಕಾರ್ಯಾಲಯದ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹೊಸಮನಿ, ಬಲಭೀಮ ಬೆವನಹಳ್ಳಿ, ವಾಸು ಕೋಗಿಲ್ಕರ್, ಮರಿಯಪ್ಪ ಕ್ರಾಂತಿ, ಸಂತೋಷ್ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ಶ್ರೀಮಂತ ಸಿಂಗನಹಳ್ಳಿ, ಬಾಲರಾಜ ಖಾನಾಪುರ್, ದೊಡ್ಡಪ್ಪ ಕಾಡಂಗೆರ, ಭೀಮಶಂಕರ್ ಗುಂಡಳ್ಳಿ, ಸಾಯಿಬಣ್ಣ ಬನ್ನಟ್ಟಿ, ಜೈಭೀಮ ಸಿಂಗಳ್ಳಿ, ಚಂದ್ರು ಕುರುಕುಂದಿ, ನಾಗರಾಜ್ ಕೊಡಮನಹಳ್ಳಿ, ಪುನೀತ್ ಸಿಂಗನಹಳ್ಳಿ, ಮಲ್ಲು ಕೋಳಿ ಸೇರಿದಂತೆ ಅನೇಕ ದಲಿತ ಮುಖಂಡರ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ